ಡೌಮದಲ್ಲಿ ರಾಸಾಯನಿಕ ದಾಳಿ: ವಿಶ್ವಸಂಸ್ಥೆ
500 ರೋಗಿಗಳಲ್ಲಿ ವಿಷಾನಿಲ ಲಕ್ಷಣಗಳು

ಜಿನೇವ (ಸ್ವಿಟ್ಸರ್‌ಲ್ಯಾಂಡ್), ಎ. 11: ಸಿರಿಯದ ಡೌಮ ಪಟ್ಟಣದಲ್ಲಿ ಕಳೆದ ವಾರಾಂತ್ಯದಲ್ಲಿ ನಡೆದಿದೆಯೆನ್ನಲಾದ ರಾಸಾಯನಿಕ ಅಸ್ತ್ರಗಳ ದಾಳಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಖಂಡಿಸಿದೆ.
ವಿಷಕಾರಿ ರಾಸಾಯನಿಕಗಳನ್ನು ಸಂಪರ್ಕಿಸಿದರೆ ಉಂಟಾಗುವ ಲಕ್ಷಣಗಳುಳ್ಳ ಸುಮಾರು 500 ರೋಗಿಗಳು ವಿವಿಧ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ ಎಂದು ಅದು ಹೇಳಿದೆ.
‘‘ರಾಸಾಯನಿಕ ದಾಳಿಯ ಸಂತ್ರಸ್ತರಿಗೆ ಆರೋಗ್ಯ ಸೇವೆ ನೀಡಲು, ಜನರ ಆರೋಗ್ಯದ ಮೇಲೆ ಉಂಟಾಗಿರುವ ಪರಿಣಾಮವನ್ನು ಅಂದಾಜಿಸಲು ಹಾಗೂ ಸಮಗ್ರ ಸಾರ್ವಜನಿಕ ಆರೋಗ್ಯವನ್ನು ಖಾತರಿಪಡಿಸಲು ದಾಳಿ ನಡೆದ ಪ್ರದೇಶಕ್ಕೆ ಮುಕ್ತ ಪ್ರವೇಶವನ್ನು ತಕ್ಷಣ ನೀಡಬೇಕು ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಒತ್ತಾಯಿಸುತ್ತದೆ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಸಿದ್ಧತೆ ಮತ್ತು ಸ್ಪಂದನೆ ವಿಭಾಗದ ಉಪ ಮಹಾನಿರ್ದೇಶಕ ಪೀಟರ್ ಸಲಾಮ ಜಿನೇವದಲ್ಲಿ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದರು.
ರಾಸಾಯನಿಕ ದಾಳಿ ನಡೆದಿದೆಯೆನ್ನಲಾದ ಡೌಮ ಸೇರಿದಂತೆ ಪೂರ್ವ ಘೌತದ ಹೆಚ್ಚಿನ ಪ್ರದೇಶಗಳಿಗೆ ಹೋಗಲು ವಿಶ್ವಸಂಸ್ಥೆಯ ನೆರವು ಸಂಸ್ಥೆಗಳಿಗೆ ಅನುಮತಿಯಿಲ್ಲ.
ಜಂಟಿ ದಾಳಿ ಬಗ್ಗೆ ಮಿತ್ರದೇಶಗಳ ಜೊತೆ ಅಮೆರಿಕ ಮಾತುಕತೆ
ಸಿರಿಯದ ಡೌಮ ಪಟ್ಟಣದ ಮೇಲೆ ದೇಶದ ಸರಕಾರಿ ಪಡೆಗಳು ವಿಷಾನಿಲ ದಾಳಿ ನಡೆಸಿವೆಯೆಂಬ ವರದಿಗಳ ಹಿನ್ನೆಲೆಯಲ್ಲಿ, ಆ ದೇಶದ ವಿರುದ್ಧ ಜಂಟಿ ಸೇನಾ ಸೇನಾ ಕಾರ್ಯಾಚರಣೆಯ ಸಾಧ್ಯತೆ ಬಗ್ಗೆ ಅಮೆರಿಕದ ಟ್ರಂಪ ಆಡಳಿತದ ಅಧಿಕಾರಿಗಳು ಮಂಗಳವಾರ ಮಿತ್ರದೇಶಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾಗತಿಕ ನಾಯಕರೊಂದಿಗೆ ಮಾತನಾಡಿದರು ಹಾಗೂ ಈ ವಾರದ ಮುಕ್ತಾಯದ ಒಳಗೆ ಸಿರಿಯದ ಮೇಲೆ ಜಂಟಿ ದಾಳಿ ನಡೆಸುವ ಸಾಧ್ಯತೆ ಬಗ್ಗೆ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್‌ಗಳು ಸುದೀರ್ಘ ಸಮಾಲೋಚನೆಗಳನ್ನು ನಡೆಸಿದವು ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.







