ವಿಷಾನಿಲ ದಾಳಿ ತನಿಖೆಗೆ ರಶ್ಯ ವೀಟೊ
ನ್ಯೂಯಾರ್ಕ್, ಎ. 11: ಸಿರಿಯ ರಾಜಧಾನಿ ಡಮಾಸ್ಕಸ್‌ನ ಹೊರವಲಯದ ಡೌಮ ಪಟ್ಟಣದ ಮೇಲೆ ದೇಶದ ಸರಕಾರಿ ಸೈನಿಕರು ನಡೆಸಿದ್ದಾರೆನ್ನಲಾದ ವಿಷಾನಿಲ ದಾಳಿ ಬಗ್ಗೆ ತನಿಖೆ ನಡೆಯಬೇಕು ಹಾಗೂ ಸಿರಿಯ ಸರಕಾರವನ್ನು ಖಂಡಿಸಬೇಕು ಎಂದು ವಿಶ್ವಸಂಸ್ಥೆಯನ್ನು ಕೋರುವ ಅಮೆರಿಕದ ಕರಡು ನಿರ್ಣಯಕ್ಕೆ ರಶ್ಯ ಮಂಗಳವಾರ ವೀಟೊ ಚಲಾಯಿಸಿದೆ.
ಸಿರಿಯದ ಓರ್ವ ವ್ಯಕ್ತಿಯನ್ನು (ಅಧ್ಯಕ್ಷ ಬಶರ್ ಅಲ್ ಅಸಾದ್) ರಕ್ಷಿಸುವ ರಶ್ಯದ ಪ್ರವೃತ್ತಿಯನ್ನು ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿ ನಿಕ್ಕಿ ಹೇಲಿ ಖಂಡಿಸಿದರು.
ಏಳು ವರ್ಷಗಳ ಹಿಂದೆ ಸಿರಿಯದಲ್ಲಿ ಆಂತರಿಕ ಸಂಘರ್ಷ ಆರಂಭಗೊಂಡಂದಿನಿಂದ ಸಿರಿಯ ವಿರುದ್ಧ ಮಂಡಿಸಲಾದ 12 ನಿರ್ಣಯಗಳಿಗೂ ರಶ್ಯ ವೀಟೊ ಚಲಾಯಿಸಿರುವುದನ್ನು ಸ್ಮರಿಸಬಹುದಾಗಿದೆ.
ರಶ್ಯದ ಈ ಕೃತ್ಯ ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ ಎಂದು ನಿಕ್ಕಿ ಹೇಲಿ ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಡೌಮಕ್ಕೆ ರಾಸಾಯನಿಕ ಅಸ್ತ್ರ ತಪಾಸಕರು
ಡೌಮದಲ್ಲಿ ರಾಸಾಯನಿಕ ದಾಳಿ ನಡೆದಿದೆ ಎಂಬ ವರದಿಗಳ ಬಗ್ಗೆ ತನಿಖೆ ಮಾಡಲು ರಾಸಾಯನಿಕ ಅಸ್ತ್ರಗಳ ನಿಷೇಧ ಸಂಸ್ಥೆ (ಒಪಿಸಿಡಬ್ಲು)ಯ ಇನ್ಸ್‌ಪೆಕ್ಟರ್‌ಗಳನ್ನು ಆ ಪಟ್ಟಣಕ್ಕೆ ಕಳುಹಿಸಲಾಗುವುದು ಎಂದು ಸಂಸ್ಥೆಯು ಮಂಗಳವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಇದಕ್ಕಾಗಿ ಅಗತ್ಯ ಏರ್ಪಾಡುಗಳನ್ನು ಮಾಡುವಂತೆ ಸಂಸ್ಥೆಯು ಸಿರಿಯಕ್ಕೆ ಮನವಿ ಮಾಡಿದೆ ಎಂದು ಅದು ಹೇಳಿದೆ.







