ಮಡಿಕೇರಿ: ವಿಧಾನಸಭಾ ಚುನಾವಣೆ ಹಿನ್ನೆಲೆ; ಅಂತರಾಜ್ಯ ಗಡಿ ಜಿಲ್ಲೆಗಳ ಡಿಸಿ, ಎಸ್‍ಪಿಗಳೊಂದಿಗೆ ಮಹತ್ವದ ಸಭೆ

ಮಡಿಕೇರಿ, ಏ.11: ವಿಧಾನಸಭಾ ಚುನಾವಣೆ ಹಿನ್ನಲೆ ಕೊಡಗು ಜಿಲ್ಲೆಗೆ ಹೊಂದಿಕೊಂಡಿರುವ ಅಂತರ ರಾಜ್ಯ ಗಡಿಭಾಗದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಭೆಯು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
ಸಭೆಯಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ವೈನಾಡು ಜಿಲ್ಲಾಧಿಕಾರಿ ಎಸ್.ಸುಹಾಸ್, ಕಾಸರಗೋಡು ಜಿಲ್ಲಾಧಿಕಾರಿ ಜೀವನ್ ಬಾಬು, ಕಣ್ಣೂರು ಜಿಲ್ಲೆಯ ಸಬ್ ಕಲೆಕ್ಟರ್ ಚಂದ್ರಶೇಖರ್ ಮತ್ತು ಕಾಸರಗೋಡು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿಮೋನ್, ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ.ಸತೀಶ್ ಕುಮಾರ್ ಇತರರು ಹಾಜರಿದ್ದರು.
ಸಭೆಯ ಆರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಕೊಡಗು ಜಿಲ್ಲೆಗೆ ಹೊಂದಿಕೊಂಡಿರುವ ನೆರೆ ರಾಜ್ಯದ ಜಿಲ್ಲೆಗಳಾದ ಕಣ್ಣೂರು, ವೈನಾಡು ಮತ್ತು ಕಾಸರಗೋಡು ಜಿಲ್ಲೆಯ ಜನರು ಒಂದಲ್ಲ ಒಂದು ರೀತಿಯಲ್ಲಿ ವ್ಯಾಪಾರ, ವಹಿವಾಟು ಮತ್ತು ಆರ್ಥಿಕ ಚಟುವಟಿಕೆಗೆ ಜಿಲ್ಲೆಯನ್ನು ಅವಲಂಭಿಸಿದ್ದಾರೆ. ಆದ್ದರಿಂದ ಯಾವುದೇ ರೀತಿಯಲ್ಲಿ ಚುನಾವಣೆಗೆ ಭಂಗ ಉಂಟಾಗದಂತೆ ಶಾಂತಿಯುವಾಗಿ ಮತ್ತು ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಕೋರಿದರು.
ಜಿಲ್ಲೆಯ ಕುಟ್ಟ, ಮಾಕುಟ್ಟ ಹಾಗೂ ಕರಿಕೆಗಳಲ್ಲಿ ಅಂತರ ರಾಜ್ಯ ಚೆಕ್ ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದ್ದು, ಯಾವುದೇ ರೀತಿಯ ಅಕ್ರಮ ಚಟುವಟಿಗಳಿಗೆ ಅವಕಾಶವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಆ ನಿಟ್ಟಿನಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಸಲು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ನೆರೆ ರಾಜ್ಯದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಪಿ.ಐ.ಶ್ರೀವಿದ್ಯಾ ಅವರು ಮನವಿ ಮಾಡಿದರು.
ಐವತ್ತು ಸಾವಿರ ರೂ ವರೆಗೆ ನಗದು ಹಣ ತೆಗೆದುಕೊಂಡು ಹೋಗಬಹುದಾಗಿದೆ. ಆದರೆ ಐವತ್ತು ಸಾವಿರ ರೂ.ಕ್ಕಿಂತ ನಗದು ತೆಗೆದುಕೊಂಡು ಹೋಗುವುದು ಕಂಡುಬಂದಲ್ಲಿ ದಾಖಲೆಗಳನ್ನು ಪರಿಶೀಲಿಸಬೇಕಿದೆ. ಜೊತೆಗೆ ಸಾಮಾಗ್ರಿಗಳನ್ನು ಕೊಂಡೊಯ್ಯುವುದು ಕಂಡು ಬಂದರೆ ತಪಾಸಣೆ ಮಾಡಬೇಕಿದೆ. ಈ ಸಂಬಂಧ ಆಯಾಯ ಜಿಲ್ಲೆಗಳಲ್ಲಿ ಪತ್ರಿಕಾ ಪ್ರಕಟಣೆ ನೀಡುವಂತೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಸಲಹೆ ಮಾಡಿದರು.
ಸದ್ಯದಲ್ಲಿಯೇ ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ವೃತ್ತಿಪರ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಮತ್ತು ಕುಟುಂಬದವರು ರಾಜ್ಯಕ್ಕೆ ಆಗಮಿಸಲ್ಲಿದ್ದಾರೆ. ಅಂತಹ ಸಮಯದಲ್ಲಿ ನಗದು ತೆಗೆದುಕೊಂಡು ಬರುವವರ ಕಂಡುಬಂದರೆ ದಾಖಲೆಗಳನ್ನು ಪರಿಶೀಲಿಸಬೇಕಿದೆ. ಆದ್ದರಿಂದ ಸಾಧ್ಯವಾದಷ್ಟು ಹಣಕಾಸಿನ ವ್ಯವಹಾರವನ್ನು ಬ್ಯಾಂಕಿನ ಮೂಲಕ ವ್ಯವಹರಿಸುವುದು ಸೂಕ್ತ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದರು.
ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಮಾತನಾಡಿ ಕುಟ್ಟ, ಮಾಕುಟ್ಟ, ಕರಿಕೆ ಭಾಗಗಳನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಚುನಾವಣೆಯಲ್ಲಿ ಯಾವುದೇ ರೀತಿ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ಶಾಂತಿಯುವಾಗಿ ಚುನಾವಣೆ ನಡೆಸಲು ಸಹಕರಿಸುವಂತೆ ಅವರು ಕೋರಿದರು.
ಗಡಿಭಾಗಳಲ್ಲಿ ಅಂತರ ರಾಜ್ಯ ಚೆಕ್‍ಪೋಸ್ಟ್‍ಗಳನ್ನು ತೆರೆಯಲಾಗಿದೆ. ಈ ಪ್ರದೇಶದಲ್ಲಿ ಅಗತ್ಯ ನಾಮಫಲಕ ಅಳವಡಿಸಲಾಗಿದೆ ಎಂದು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಮಾಹಿತಿ ನೀಡಿದರು.
ಸಭೆಯಲ್ಲಿ ವೈನಾಡು ಜಿಲ್ಲಾಧಿಕಾರಿ ಎಸ್.ಸುಹಾಸ್, ಕಾಸರಗೋಡು ಜಿಲ್ಲಾಧಿಕಾರಿ ಜೀವನ್ ಬಾಬು, ಕಣ್ಣೂರು ಜಿಲ್ಲೆಯ ಸಬ್‍ಕಲೆಕ್ಟರ್ ಚಂದ್ರಶೇಖರ್ ಮತ್ತು ಕಾಸರಗೋಡು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿಮೊನ್ ಅವರು ವಿಧಾನಸಬಾ ಹಿನ್ನಲೆಯಲ್ಲಿ ಕೇರಳ ರಾಜ್ಯದ ಗಡಿಭಾಗದಲ್ಲಿ ಕಟ್ಟೆಚರ ವಹಿಸಲಾಗುವುದು. ಜೊತೆಗೆ ಶಾಂತಿಯುತ ಚುನಾವಣೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಅವರು ತಿಳಿಸಿದರು.
ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಅವರು ಚುನಾವಣೆ ಸಂಬಂಧ ಹಲವು ಸಲಹೆ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ.ಸತೀಶ್ ಕುಮಾರ್, ಡಿವೈಎಸ್.ಪಿಗಳಾದ ಸುಂದರ ರಾಜ್, ನಾಗಪ್ಪ, ಚುನಾವಣಾ ಶಿರಸ್ತೆದಾರರಾದ ಪ್ರಕಾಶ್, ಅರುಣ್ ಸಾಗರ್, ಅನಿಲ್ ಕುಮಾರ್ ಇತರರು ಹಾಜರಿದ್ದರು.







