ಕೊಣಾಜೆ: ಚುನಾವಣಾ ಮುಂಜಾಗ್ರತಾ ಕ್ರಮಕ್ಕಾಗಿ ಸುರಕ್ಷಾ ಸೀಮಾ ಬಲ್ ಯೋಧರಿಂದ ರೂಟ್ ಮಾರ್ಚ್

ಕೊಣಾಜೆ, ಎ. 11: ಚುನಾವಣೆಯ ಮುಂಜಾಗ್ರತಾ ಕ್ರಮಕ್ಕಾಗಿ ಕೊಣಾಜೆ ಠಾಣಾ ವ್ಯಾಪ್ತಿಯ ವಿವಿದೆಡೆ ಸುರಕ್ಷಾ ಸೀಮಾ ಬಲ್ ಪಡೆಯ ಯೋಧರಿಂದ ಕೊಣಾಜೆ ಪೊಲೀಸರ ಸಹಕಾರದೊಂದಿಗೆ ರೂಟ್ ಮಾರ್ಚ್ ಬುಧವಾರ ನಡೆಯಿತು.
ದೇರಳಕಟ್ಟೆಯ ಬೆಳ್ಮ ಪಂಚಾಯತ್ ಆವರಣದಿಂದ ಆರಂಭಗೊಂಡಂತಹ ರೂಟ್ ಮಾರ್ಚ್ ನಾಟೆಕಲ್‌ನಿಂದ ಕಲ್ಕಟ್ಟ, ತೌಡುಗೋಳಿಯಿಂದ ಹೂಹಾಕುವಕಲ್ಲು , ಮುಡಿಪು ನವೋದಯ ಶಾಲೆಯಿಂದ ಕಾಯರ್ ಗೋಳಿ ಮತ್ತು ಬೋಳಿಯಾರಿನಿಂದ ಚೇಳೂರು ವರೆಗೆ ರೂಟ್ ಮಾರ್ಚ್ ನಡೆಯಿತು.
ಚುನಾವಣಾ ಪೂರ್ವಭಾವಿಯಾಗಿ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಮತದಾನದವರೆಗೂ ಶಾಂತಿ ಕಾಪಾಡುವ ಸಲುವಾಗಿ ಮಾರ್ಚ್ ಹಮ್ಮಿಕೊಳ್ಳಲಾಗಿತ್ತು. ಸುರಕ್ಷಾ ಸೀಮಾ ಬಲ್ ಪಡೆಯ ಕಮಾಂಡೆಂಟ್ ಪ್ರತಿಕ್ಷಾ, ಸಹ ಕಮಾಂಡೆಂಟ್ ಅಭಿಷೇಕ್ ಸಿಂಗ್ , ಲಲಿತ್ ದೋಹಾಲ್, ಕೊಣಾಜೆ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಕಾಶ್.ಪಿ, ಎ.ಎಸ್.ಐ ರಾಮಚಂದ್ರ ಹಾಗೂ ಕೊಣಾಜೆ ಠಾಣಾ ಸಿಬ್ಬಂದಿ ರೂಟ್ ಮಾರ್ಚ್ ನೇತೃತ್ವ ವಹಿಸಿದ್ದರು.
ಈ ವೇಳೆ 80 ಮಂದಿ ಯೋಧರು, ವಜ್ರ ಪಡೆ, ಕೊಣಾಜೆ ಠಾಣೆಯ ಎರಡು ಪಿಸಿಆರ್ ಹಾಗೂ ಹೈವೇ ಪ್ಯಾಟ್ರಲ್ ಭಾಗವಹಿಸಿತ್ತು. ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಆಮರಣಾಂತ ಉಪವಾಸ ನಡೆದ ಹಿನ್ನೆಲೆಯಲ್ಲಿ ಹೆಚ್ಚಿನ ಒತ್ತನ್ನು ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ನೀಡಲಾಗಿದ್ದು, ಈ ನಿಟ್ಟಿನಲ್ಲಿ ಮೊದಲ ರೂಟ್ ಮಾರ್ಚ್‌ನ್ನು ಈ ಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.





