ಬಂಟ ಸಮಾಜದ ಮಹಿಳೆ ತಲೆ ಎತ್ತಿ ನಡೆಯಲು ಬಿಡಿ : ಕೃಪಾ ಅಮರ್ ಆಳ್ವ

ಮಂಗಳೂರು, ಎ.11: ಹೆಣ್ಣು ಸಂಸ್ಕೃತಿ, ಸಂಸ್ಕಾರದ ಪ್ರತೀಕ. ಆಕೆ ಗಂಡನನ್ನು ಕಳೆದುಕೊಂಡಾಗ ಸಹಿಸಲಾಗದ ದುಃಖದಲ್ಲಿರುತ್ತಾಳೆ. ಆದರೆ ಆ ಸಂದರ್ಭದಲ್ಲೂ ಆಕೆಯ ಮಾಂಗಲ್ಯ, ಮೂಗುತಿ, ತಲೆಯಲ್ಲಿದ್ದ ಹೂವನ್ನು ಕಿತ್ತುಕೊಳ್ಳುವುದು ಸರಿಯಲ್ಲ. ಆಕೆಯನ್ನು ಸಮಾಜದಲ್ಲಿ ತಲೆಯೆತ್ತಿ ನಡೆಯಲು ಬಿಡಿ. ವಿಧವೆಗೆ ಬೇರೆ ಪಟ್ಟವನ್ನು ಕಟ್ಟಿಕೊಳ್ಳುವ ಪ್ರಯತ್ನದಿಂದ ಈ ಸಮಾಜ ದೂರ ಸರಿಯಬೇಕಾಗಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಅಮರ್ ಆಳ್ವ ಕರೆ ನೀಡಿದರು.
ಬಂಟರ ಸಂಘ ಸುರತ್ಕಲ್ ಮಹಿಳಾ ವೇದಿಕೆಯ ಆಶ್ರಯದಲ್ಲಿ ಬಂಟರ ಭವನದಲ್ಲಿ ಜರಗಿದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಬಂಟ ಸಮಾಜ ಅಳಿಯ ಸಂತಾನದ ಸಮಾಜವಾಗಿದ್ದು, ಪ್ರಾಚೀನ ಕಾಲದಿಂದಲೂ ಬಂಟರು ವಿಶೇಷ ನಾಯಕತ್ವ ಗುಣವನ್ನು ಹೊಂದಿದವರಾಗಿದ್ದಾರೆ. ಇಲ್ಲಿ ಮಳೆಯರಿಗೂ ಪ್ರಾಧಾನ್ಯತೆ ಇದೆ. ಮಹಿಳೆಯರು ಪುರುಷರನ್ನು ಮುಂದಿಟ್ಟುಕೊಂಡು ಮುನ್ನಡೆದಿದ್ದಾರೆ ಎಂದು ಕೃಪಾ ಅಮರ್ ಆಳ್ವ ತಿಳಿಸಿದರು.
ಶ್ರೀದೇವಿ ವಿದ್ಯಾ ಸಮೂಹ ಸಂಸ್ಥೆಗಳ ನಿರ್ದೇಶಕ ಮೈನಾ ಎಸ್. ಶೆಟ್ಟಿ ಮಾತನಾಡಿ, ಬಂಟ ಸಮಾಜ ಇತರ ಸಮಾಜಕ್ಕೆ ಮಾದರಿಯಾಗುವಂತಹ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಹೆಣ್ಮಕ್ಕಳು ಇಂದು ವಿದ್ಯಾವಂತರಾಗಿರುವುದು ಉತ್ತಮ ವಿಚಾರವಾಗಿದೆ. ಆದರೆ ಹೆಣ್ಮಕ್ಕಳ ವಿದ್ಯಾಭ್ಯಾಸ ನಾಶಕ್ಕೆ ಕಾರಣವಾಗಬಾರದು ಎಂದರು.
ಮೈನಾ ಶೆಟ್ಟಿ ಮಾತನಾಡಿ ಈ ಹಿಂದೆ ಹೆಣ್ಣಿಗೆ ಗಂಡನೇ ದೇವರು. ಆದರೆ ಇಂದು ಮದುವೆ ಎನ್ನುವುದು ಈ ಹಿಂದಿನ ಪಾವಿತ್ರ್ಯತೆಯನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿದೆ. ಹೀಗಾಗಿ ಹೆಣ್ಣಿಗೆ ವಿದ್ಯೆಯ ಜತೆಗೆ ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರಗಳ ಅರಿವು ಇರಬೇಕು ಎಂದು ಹೇಳಿದರು. ಕಾರ್ಕಳ ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಜ್ಯೋತಿ ಸುನೀಲ್ ಶೆಟ್ಟಿ ಮಾತನಾಡಿದರು.
ಮಹಿಳಾ ವೇದಿಕೆಯ ಅಧ್ಯಕ್ಷೆ ಚಂದ್ರಕಲಾ ಬಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್ ಆರ್. ಶೆಟ್ಟಿ, ಮಹಿಳಾ ವೇದಿಕೆಯ ಉಪಾಧ್ಯಕ್ಷೆ ಬೇಬಿ ಶೆಟ್ಟಿ, ಕೋಶಾಧಿಕಾರಿ ಭವ್ಯಾ ಎ. ಶೆಟ್ಟಿ, ಜತೆ ಕಾರ್ಯದರ್ಶಿ ಚಿತ್ರಾ ಜೆ. ಶೆಟ್ಟಿ, ಸಂಘಟನಾ ಕಾರ್ಯದರ್ಶಿ ವೀಣಾ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಜಯಭಾರತಿ ಶೆಟ್ಟಿ ವಂದಿಸಿದರು. ಸುಧಾ ಸಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







