"ಮೋದಿಯ ತಮಿಳುನಾಡು ಭೇಟಿಗೆ ನನ್ನ ವಿರೋಧವಿದೆ" ಎಂದು ಬರೆದಿಟ್ಟು ಮೈಗೆ ಬೆಂಕಿ ಹಚ್ಚಿದ ಯುವಕ

ಈರೋಡ್(ತ.ನಾ),ಎ.12: ಕಾವೇರಿ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ‘ನಿಷ್ಕ್ರಿಯತೆ’ಯನ್ನು ಪ್ರತಿಭಟಿಸಿ 25ರ ಯುವಕನೋರ್ವ ಗುರುವಾರ ಇಲ್ಲಿ ತನ್ನ ಮೈಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ.
ಈರೋಡ್ ಸರಕಾರಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿರುವ ಶೇ.90ರಷ್ಟು ಸುಟ್ಟಗಾಯ ಗಳಾಗಿರುವ ಧರ್ಮಲಿಂಗಂ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ಮತ್ತು ವೈದರು ತಿಳಿಸಿದರು. ಆತ ಕಳೆದೆರಡು ದಿನಗಳಿಂದ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ಎಂದು ಪೊಲೀಸರು ತಿಳಿಸಿದರು.
ತಿರುವಿದಂಥೈನಲ್ಲಿ ದೇಶದ ಬೃಹತ್ ರಕ್ಷಣಾ ಪ್ರದರ್ಶನ ‘ಡಿಫೆಕ್ಸ್ಫೋ’ ದ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿಯವರು ತಮಿಳುನಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿಯೇ ಧರ್ಮಲಿಂಗಂ ಆತ್ಮಾಹುತಿ ಪ್ರಯತ್ನ ನಡೆದಿದೆ.
‘‘ಕಾವೇರಿ ನೀರು ತಮಿಳುನಾಡು ಜನತೆಯ ಪಾಲಿಗೆ ಜೀವನಾಡಿಯಾಗಿದೆ. ಆದರೂ ಮುಖ್ಯಮಂತ್ರಿ ಪಳನಿಸ್ವಾಮಿ ಮತ್ತು ಪ್ರಧಾನಿ ಮೋದಿ ಅವರು ಕಾವೇರಿ ನಿರ್ವಹಣೆ ಮಂಡಳಿ ರಚನೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ತಮಿಳುನಾಡಿಗೆ ಮೋದಿ ಭೇಟಿಯನ್ನೂ ನಾನು ವಿರೋಧಿಸುತ್ತೇನೆ’’ ಎಂದು ಧರ್ಮಲಿಂಗಂ ತನ್ನ ಮನೆಯ ಗೋಡೆಯ ಮೆಲೆ ಬರೆದಿಟ್ಟಿದ್ದಾನೆ.





