ಬೆಂಗಳೂರು: ಕೊಲೆಗೈದು ಶವ ಸುಟ್ಟ ಆರೋಪಿಗಳ ಬಂಧನ

ಬೆಂಗಳೂರು, ಎ.12: ರಜೆ ನೀಡುವ ವಿಚಾರವಾಗಿ ವ್ಯಕ್ತಿಯೊಬ್ಬನನ್ನು ಕೊಲೆಗೈದು ಪೆಟ್ರೋಲ್‌ನಿಂದ ಶವ ಸುಟ್ಟ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ವೈಟ್ ಫೀಲ್ಡ್ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಕಾಡುಬೀಸನಹಳ್ಳಿಯ ಡಿಟಿಡಿಸಿ ಕೊರಿಯರ್ ಹಿಂಭಾಗದ ಸೆವೆನ್ ಹಿಲ್ಸ್ ಅತಿಥಿ ಗೃಹದಲ್ಲಿದ್ದ ಮಹೇಶ್ ರೆಡ್ಡಿ(22), ಎನ್.ವಿನೀತ್(22) ಹಾಗೂ ರಾಮಿರೆಡ್ಡಿ(52) ಬಂಧಿತ ಆರೋಪಿಗಳೆಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.
ಘಟನೆ ವಿವರ: ಎ.4ರ ಬೆಳಗ್ಗೆ 7:30ರ ಸುಮಾರಿಗೆ ಇಲ್ಲಿನ ಕೆಂಪಾಪುರ ರಸ್ತೆಯ ಏರ್‌ವ್ಯೆವ್ ಬೇಲಿಯ ಗಿಡಗಳಲ್ಲಿ ಯುವಕನೊಬ್ಬನ ಶವ ಬಿದ್ದಿದ್ದ ಬಗ್ಗೆ ಶ್ರೀನಿವಾಸ್ ಎಂಬುವರು ಮಾರತ್ತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಸಂಬಂಧ ವೈಟ್‌ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್, ಎಸಿಪಿ ಹಾಗೂ ಪಿಎಸ್ಸೈ ಸಾದಿಕ್ ಪಾಷಾ ಅವರ ನೇತೃತ್ವದಲ್ಲಿ ತಂಡವು ತನಿಖೆ ನಡೆಸಿ, ಶವ ಪತ್ತೆಯಾದ ಸ್ಥಳದಿಂದ ಕೆಂಪಾಪುರ, ಚಲ್ಲಘಟ್ಟ ರಸ್ತೆ, ಓಲ್ಡ್ ಏರ್‌ಪೋರ್ಟ್ ರಸ್ತೆ, ಎಚ್‌ಎಎಲ್ ಬೇಲಿ ಸುತ್ತಮುತ್ತ ಸೇರಿದಂತೆ ಒಟ್ಟು 200ಕ್ಕಿಂತಲೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರು.
ಬಳಿಕ ಹಳೇ ವಿಮಾನ ನಿಲ್ದಾಣ ರಸ್ತೆಯ ಪೆಟ್ರೋಲ್ ಬಂಕ್‌ವೊಂದರ ಬಳಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಗಳನ್ನು ಒಂದಕ್ಕೊಂದು ತುಲನೆ ಮಾಡಿ, ಆರೋಪಿಗಳ ಚಲನವಲನಗಳ ಮೇಲೆ ನಿಗಾಯಿಟ್ಟು ಹಾಗೂ ಮೊಬೈಲ್ ಸಂಪರ್ಕದ ಬಗ್ಗೆ ಮಾಹಿತಿ ಸಂಗ್ರಹಿಸಿ ಕೃತ್ಯವೆಸಗಿದ ಮೂರು ದಿನದಲ್ಲೇ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿ ಮಹೇಶ್ ರೆಡ್ಡಿ ಹಾಗೂ ರಾಮಿರೆಡ್ಡಿ ಬಳಿ ಅಡುಗೆ ಕೆಲಸ ಮಾಡುತ್ತಿದ್ದ ಮೃತ ಮುರುಳಿ ಮೂಲತಃ ಕುಪ್ಪಂ ನಿವಾಸಿಯಾಗಿದ್ದ. ರಾತ್ರಿ ವೇಳೆಯಲ್ಲಿ ರಜೆ ನೀಡುವ ವಿಷಯದಲ್ಲಿ ಜಗಳ ನಡೆದು, ಅತಿಥಿ ಗೃಹದಲ್ಲೇ ಆರೋಪಿಗಳು ಈತನನ್ನು ಕೊಲೆ ಮಾಡಿದ್ದರು. ಬಳಿಕ ಎಲೆಕ್ಟ್ರಿಕ್ ವೈರ್‌ನಿಂದ ಕೈ-ಕಾಲು ಕಟ್ಟಿ ಹಾಕಿ, ಆನ್‌ಲೈನ್ ಮೂಲಕ ಕಾರು ಖರೀದಿ ಮಾಡಿ, ನಿರ್ಜನ ಪ್ರದೇಶದಲ್ಲಿ ಎಸೆದು ಬೆಂಕಿ ಹಚ್ಚಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಗಂಭೀರ ಪ್ರಕರಣವನ್ನು ಮೂರು ದಿನಗಳಲ್ಲಿಯೇ ಭೇದಿಸಿದ ಪೊಲೀಸ್ ಸಿಬ್ಬಂದಿ ವರ್ಗದ ಕಾರ್ಯ ಸಾಧನೆಯನ್ನು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ಶ್ಲಾಘಿಸಿದರು.







