ನಾನು ಶಾಸಕನಾದರೆ ತಿಪ್ಪೇಸ್ವಾಮಿ ಶಾಸಕರಾದಂತೆ: ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು

ಬಳ್ಳಾರಿ, ಎ. 12: ಪಕ್ಷದ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಸೂಚನೆ ಹಿನ್ನೆಲೆಯಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ತಾನು ಶಾಸಕನಾಗಿ ಆಯ್ಕೆಯಾದರೆ ತಿಪ್ಪೇಸ್ವಾಮಿಯವರೇ ಶಾಸಕರಾದಂತೆ ಎಂದು ಸಂಸದ ಶ್ರೀರಾಮುಲು ಹೇಳಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಕ್ಷ ಬಯಸಿದರೆ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವೆ. ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಪಕ್ಷ ಸೂಚನೆ ನೀಡಿದೆ. ಪಕ್ಷ ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದು ಸ್ಪಷ್ಟಣೆ ನೀಡಿದರು.
ಬಳ್ಳಾರಿ ಜಿಲ್ಲೆಯಲ್ಲಿ ಈ ಹಿಂದೆ ನಾನು ಚುನಾವಣೆ ಎದುರಿಸಿ ಪಕ್ಷವನ್ನು ಸದೃಢಗೊಳಿಸಿದ್ದೆ. ಇದೀಗ ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ಚಿತ್ರದುರ್ಗ ಜಿಲ್ಲೆ ಇನ್ನಿತರ ಕ್ಷೇತ್ರಗಳಲ್ಲಿ ಪಕ್ಷವನ್ನು ಬಲಪಡಿಸುವ ಲೆಕ್ಕಾಚಾರ ಹಾಕಿ ಪಕ್ಷ ನನಗೆ ಟಿಕೆಟ್ ನೀಡಿದೆ. ಅದಕ್ಕಾಗಿ ಅಲ್ಲಿಂದಲೇ ಸ್ಪರ್ಧಿಸುತ್ತೇನೆ ಎಂದರು.
ಸ್ವಂತ ಜಿಲ್ಲೆ ಬಿಟ್ಟು ಅಲ್ಲಿಗೆ ಹೇಗೆ ಹೋಗಬೇಕೆಂದು ಸೂಚನೆ ನೀಡಿದರು. ಈ ಹಿಂದೆ ಮೋದಿಯವರು ವಾರಣಾಸಿಯಲ್ಲಿ ಸ್ಪರ್ಧಿಸಿ ಉತ್ತರ ಪ್ರದೇಶದಲ್ಲಿ ಪಕ್ಷ ಬಲಪಡಿಸಿದಂತೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ನನಗೆ ಈ ಅವಕಾಶ ಕಲ್ಪಿಸಿದೆ ಎಂದು ಶ್ರೀರಾಮುಲು ತಿಳಿಸಿದರು.
ಅವರೇ ಅಭ್ಯರ್ಥಿಯೆಂದು ನಾನೇ ಹೇಳಿದ್ದೆ: ಮೊಳಕಾಲ್ಮೂರು ಕ್ಷೇತ್ರದ ಜನತೆ ಈ ಮೊದಲೇ ಬಂದು ನನಗೆ ಅಲ್ಲಿಂದ ಸ್ಪರ್ಧೆ ಮಾಡುವಂತೆ ಕೋರಿದ್ದರು. ಆಗಲೇ ನಾನು ಹೇಳಿದ್ದೆ. ಇಲ್ಲಿ ತಿಪ್ಪೇಸ್ವಾಮಿ ಅವರಿಗೆ ಈ ಬಾರಿ ಟಿಕೆಟ್ ಎಂದು ನಾನೇ ಹೇಳಿದ್ದೆ. ಆದರೆ, ಪಕ್ಷ ಈ ರೀತಿ ತೀರ್ಮಾನ ತೆಗೆದುಕೊಂಡಿದೆ. ಅಲ್ಲಿನ ತಿಪ್ಪೇಸ್ವಾಮಿಯ ಬೆಂಬಲಿಗರು ವಿರೋಧಿಸುವುದು ಸಹಜ. ನಾಳೆ ನಾನೇ ಮೊಳಕಾಲ್ಮೂರು ಕ್ಷೇತ್ರಕ್ಕೆ ತೆರಳಿ ಅಲ್ಲಿನ ಜನರೊಂದಿಗೆ ಹಾಗೂ ತಿಪ್ಪೇಸ್ವಾಮಿ ಅವರೊಂದಿಗೆ ಚರ್ಚಿಸುವೆ. ತಿಪ್ಪೇಸ್ವಾಮಿಯವರು ನನ್ನ ಅಣ್ಣನಿದ್ದಂತೆ. ಅವರ ಬಗ್ಗೆ ನನಗೆ ಗೌರವವಿದೆ ಎಂದರು.
ಮುಂಬರುವ ದಿನಗಳಲ್ಲಿ ತಾನು ಶಾಸಕನಾಗಿ ಆಯ್ಕೆಯಾಗಲಿದ್ದು, ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದರೆ, ತಿಪ್ಪೇಸ್ವಾಮಿ ಅವರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು. ತಿಪ್ಪೇಸ್ವಾಮಿಯವರನ್ನು ಸಮಾಧಾನಪಡಿಸಲಾಗುವುದು ಎಂದು ಶ್ರೀರಾಮುಲು ನುಡಿದರು.
ಸಭೆ: ಮೊಳಕಾಲ್ಮೂರು ಕ್ಷೇತ್ರದ ಟಿಕೆಟ್ ಅನ್ನು ಹಾಲಿ ಶಾಸಕ ತಿಪ್ಪೇಸ್ವಾಮಿ ಬದಲಿಗೆ ಶ್ರೀರಾಮುಲುಗೆ ಘೋಷಿಸಿದ ಹಿನ್ನೆಲೆಯಲ್ಲಿ ತಿಪ್ಪೇಸ್ವಾಮಿ ಮತ್ತವರ ಬೆಂಬಲಿಗರು ಅಸಮಾಧಾನಗೊಂಡಿದ್ದಾರೆ. ಬಿಜೆಪಿ ಟಿಕೆಟ್ ಕೈತಪ್ಪಿದ್ದು, ಮುಂದಿನ ನಡೆಯ ಬಗ್ಗೆ ತಿಪ್ಪೇಸ್ವಾಮಿ ಬೆಂಬಲಿಗರೊಂದಿಗೆ ಎ.13 ರಂದು ಸಭೆ ನಡೆಸಲಿದ್ದು, ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.







