ಕುಂದಾಪುರ: ಪತ್ರಕರ್ತರಿಂದ ಹಣಕ್ಕಾಗಿ ಬೆದರಿಕೆ; ಮೂವರ ಬಂಧನ

ಕುಂದಾಪುರ, ಎ.12: ಕೋಟೇಶ್ವರ ಬೀಚ್ ರಸ್ತೆಯಲ್ಲಿರುವ ‘ಎಫ್‌ಎಂ ಪ್ಲಾಸ್ಟಿಕ್’ ಎಂಬ ವೇಸ್ಟ್ ಪ್ಲಾಸ್ಟಿಕ್ ಕಟ್ಟಿಂಗ್ ಮತ್ತು ಹೈಡ್ರೋಲಿಕ್ ಪ್ರೆಸ್ಸಿಂಗ್ ಯುನಿಟ್ ಫ್ಯಾಕ್ಟರಿಯಲ್ಲಿ ನಡೆಯುವ ಅವ್ಯವಹಾರದ ಬಗ್ಗೆ ಪತ್ರಿಕೆಯಲ್ಲಿ ಬರೆದು ಮಾನ ಹರಾಜು ಮಾಡುವುದಾಗಿ ಬೆದರಿಕೆ ಹಾಕಿರುವ ನಾಲ್ವರ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.
ಬಂಧಿತರನ್ನು ಕುಂದಾಪುರದ ಲೋಕೇಶ್, ಧರ್ಮೆಂದ್ರ, ಮಂಜುನಾಥ ಎಂದು ಗುರುತಿಸಲಾಗಿದೆ.
ಫ್ಯಾಕ್ಟರಿ ಮಾಲಕ ಫಾರೂಕ್(42) ಎಂಬವರು ಎ.9ರಂದು ಫ್ಯಾಕ್ಟರಿಯಲ್ಲಿರುವಾಗ ಕಾರಿನಲ್ಲಿ ಬಂದ ಕುಂದಾಪುರದ ಲೋಕೇಶ್, ಧರ್ಮೆಂದ್ರ, ಮಂಜುನಾಥ, ವಿಕ್ಕಿ ಯಾನೆ ವಿಕ್ರಮ ಎಂಬವರು ‘ನಾವು ಪ್ರೆಸ್ಸಿನವರು, ನಾವು ರೈಡ್ ಮಾಡುವವರು, ನೀವು ಗ್ಲುಕೋಸ್ ಬಾಟಲಿಗಳನ್ನು ತೆಗೆದುಕೊಳ್ಳಬಾರದು’ ಎಂದು ಬೆದರಿಸಿದರು. ಬಳಿಕ ಅಲ್ಲಿಯೇ ಚೀಲದಲ್ಲಿದ್ದ ಬಾಟಲಿಗಳನ್ನು ಬಿಸಾಡಿ ವೀಡಿಯೊ ಮಾಡಿ 1 ಲಕ್ಷ ರೂ. ಹಣ ಕೊಡದಿದ್ದರೆ ಅಧಿಕಾರಿಗಳಿಗೆ ಹೇಳಿ ಪತ್ರಿಕೆಯಲ್ಲಿ ಹಾಕುತ್ತೇವೆ ಎಂದು ಬೆದರಿಸಿದರು. ಈ ವೇಳೆ ಆರೋಪಿಗಳು ಫಾರೂಕ್ ಅವರಿಂದ 5000 ರೂ. ಹಣವನ್ನು ತೆಗೆದುಕೊಂಡು ಹೋಗಿದ್ದರೆಂದು ದೂರಲಾಗಿದೆ.
ಎ.12ರಂದು ಮತ್ತೆ ಫ್ಯಾಕ್ಟರಿಗೆ ಬಂದ ಲೋಕೇಶ್, ಧರ್ಮೆಂದ್ರ, ಮಂಜು ನಾಥ ಅವರು ಫಾರೂಕ್ ಅವರಲ್ಲಿ 5000ರೂ. ಹಣವನ್ನು ಕಸಿದುಕೊಂಡು ಹೋಗಿದ್ದಲ್ಲದೆ ಫ್ಯಾಕ್ಟರಿಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಪತ್ರಿಕೆಯಲ್ಲಿ ಹಾಕಿ ಮಾನ ಹರಾಜು ಮಾಡುವುದಾಗಿ ಬೆದರಿಕೆ ಹಾದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.





