ಆದಿತ್ಯನಾಥ್ ಕಚೇರಿಯಿಂದಲೇ ಶಾಸಕ ಕುಲ್ ದೀಪ್ ಬಂಧನವಾಗಬೇಕಿತ್ತು, ಆದರೆ...
ಹಿರಿಯ ಬಿಜೆಪಿ ನಾಯಕನಿಂದ ಸ್ಫೋಟಕ ಮಾಹಿತಿ

#ಉನ್ನಾವೋ ಅತ್ಯಾಚಾರ ಪ್ರಕರಣ
ಲಕ್ನೋ, ಎ.12: ಯುವತಿಯೊಬ್ಬಳು ಬಿಜೆಪಿ ಶಾಸಕ ಕುಲ್ ದೀಪ್ ಸಿಂಗ್ ಸೆಂಗರ್ ಮೇಲೆ ಹೊರಿಸಿರುವ ಅತ್ಯಾಚಾರ ಆರೋಪ ಹಾಗು ಪೊಲೀಸ್ ಕಸ್ಟಡಿಯಲ್ಲಿ ಸಂತ್ರಸ್ತೆಯ ತಂದೆ ಸಾವಿನ ನಂತರ ಉತ್ತರ ಪ್ರದೇಶ ಸರಕಾರದ ವಿರುದ್ಧ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ,
ಈ ನಡುವೆ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಶಾಸಕ ಕುಲ್ ದೀಪ್ ಬಂಧನಕ್ಕೆ ನಿರ್ಧರಿಸಿದ್ದರು ಆದರೆ ‘ಪ್ರಮುಖ ವ್ಯಕ್ತಿ’ಯೊಬ್ಬರಿಂದ ಕರೆ ಬಂದ ನಂತರ ನಿರ್ಧಾರವನ್ನು ಬದಲಿಸಬೇಕಾಯಿತು ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.
“ಕುಲ್ ದೀಪ್ ಸೇಂಗರ್ ನನ್ನು ಬಂಧಿಸಲು ಆದಿತ್ಯನಾಥ್ ನಿರ್ಧರಿಸಿದ್ದರು. ಮುಖ್ಯಮಂತ್ರಿಯ ಕಚೇರಿಯಿಂದಲೇ ಆತನ ಬಂಧನವಾಗಬೇಕಿತ್ತು. ಉನ್ನಾವೋದಿಂದ ಇಬ್ಬರು ಶಾಸಕರನ್ನು ಉಚ್ಛಾಟಿಸಲು ಮುಖ್ಯಮಂತ್ರಿ ನಿರ್ಧಾರ ಕೈಗೊಂಡಿದ್ದರು. ಆದರೆ ಅವರಿಗೆ ‘ಪ್ರಮುಖ ವ್ಯಕ್ತಿ’ಯೊಬ್ಬರಿಂದ ಕರೆ ಬಂತು. ನಂತರ ಅವರು ನಿರ್ಧಾರವನ್ನು ಬದಲಿಸಿದರು. ಈ ನಿರ್ಧಾರದ ಪರಿಣಾಮ ಪಕ್ಷದ ಮೇಲಾಗಿದೆ” ಎಂದು ಪಕ್ಷದ ಹಿರಿಯ ನಾಯಕ ಹಾಗು ಮಾಜಿ ರಾಜ್ಯ ಸಚಿವ ಐ.ಪಿ. ಸಿಂಗ್ ಟ್ವೀಟ್ ಮಾಡಿದ್ದಾರೆ.





