ಎಸಿಬಿ ದಾಳಿ ಪ್ರಕರಣ: ಅಧಿಕಾರಿಗಳ ಬಳಿ ಕೋಟಿಗಟ್ಟಲೆ ಆಸ್ತಿ ಪತ್ತೆ

ಬೆಂಗಳೂರು, ಎ.12: ಆದಾಯ ಮೀರಿ ಆಸ್ತಿ ಸಂಪಾದನೆ ಆರೋಪದ ಮೇಲೆ ಆರು ಅಧಿಕಾರಿಗಳ ಮೇಲೆ ಎಸಿಬಿ ದಾಳಿ ನಡೆಸಿದ ಪ್ರಕರಣ ಸಂಬಂಧ ಕೋಟಿಗಟ್ಟಲೆ ಆಸ್ತಿ ಪತ್ತೆಯಾಗಿದೆ.
ಹುಬ್ಬಳ್ಳಿ: ಕೆಪಿಟಿಸಿಎಲ್ ಕಚೇರಿಯ ಸಹಾಯಕ ಕಾರ್ಯಪಾಲ ಅಭಿಯಂತರ ಮಲ್ಲಿಕಾರ್ಜುನ್ ಎನ್.ಸವಣೂರ ಅವರ ಮೂರು ಮನೆ ಸೇರಿ ಕಚೇರಿ ಮೇಲೆ ದಾಳಿ ನಡೆಸಿದಾಗ 4 ಖಾಲಿ ನಿವೇಶ, ಗದಗದಲ್ಲಿ 6 ಎಕರೆ ಕೃಷಿ ಜಮೀನು, 300 ಗ್ರಾಂ ಚಿನ್ನ, 432 ಗ್ರಾಂ ಬೆಳ್ಳಿ, ಬೈಕ್ ಹಾಗೂ ಆರು ಮೊಬೈಲ್ ಪತ್ತೆಯಾಗಿದೆ.
ಧಾರವಾಡ: ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರೀಶ್ವನಾಥ ವರೂರ ಅವರ ಸ್ವಗೃಹ ಸೇರಿದಂತೆ ಮೂರು ಮನೆ ಮತ್ತು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಮೇಲೆ ದಾಳಿ ನಡೆಸಿದಾಗ ಧಾರವಾಡ ನಗರದಲ್ಲಿ 5 ಖಾಲಿ ನಿವೇಶನ, ತಾಲೂಕಿನಲ್ಲಿ 1.20 ಎಕರೆ ಭೂಮಿ, ಹುಬ್ಬಳ್ಳಿಯಲ್ಲಿ 1.5 ಎಕರೆ 5 ಕೃಷಿ ಭೂಮಿ, 377 ಗ್ರಾಂ ಚಿನ್ನ, 2.290 ಕೆಜಿ ಬೆಳ್ಳಿ, ಒಂದು ಕಾರು, ಬೈಕ್, ಬ್ಯಾಂಕ್‌ಗಳಲ್ಲಿ 66 ಸಾವಿರ ನಗದು ಹಣ ಮತ್ತು 13.50 ಲಕ್ಷ ಠೇವಣಿ ಪತ್ತೆಯಾಗಿದೆ.
ಉಡುಪಿ: ಕುಂದಾಪುರ ತಾಲೂಕು ಪಂಚಾಯತ್ ಸಹಾಯಕ ಇಂಜಿನಿಯರ್ ರವಿಶಂಕರ್ ಅವರ ವಡೇರಾ ಹೋಬಳಿಯಲ್ಲಿರುವ ವಾಸದ ಮನೆ ಸೇರಿ 2 ಮನೆ ಹಾಗೂ ಇವರು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿಯ ಮೇಲೆ ದಾಳಿ ನಡೆಸಿದಾಗ, 4 ನಿವೇಶನಗಳು, 1.113 ಕೆಜಿ ಚಿನ್ನ, 1.74 ಕೆಜಿ ಬೆಳ್ಳಿ, ಕಾರು, ಬೈಕ್, 18.79 ಲಕ್ಷ ರೂ., 2 ದುಬಾರಿ ಮೊಬೈಲ್ ಹಾಗೂ 2 ಲಕ್ಷ ವೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
ಬೆಂಗಳೂರು: ಬಿಬಿಎಂಪಿಯ ಹೆಮ್ಮಗೆಪುರ ವಾರ್ಡ್ 198ರ ಕಂದಾಯ ನಿರೀಕ್ಷಕ ಜಿ.ಎಂ.ಶಿವಕುಮಾರ್ ಅವರ ದೊಡ್ಡಕಲ್ಲಸಂದ್ರದಲ್ಲಿರುವ ವಾಸದ ಮನೆ ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿಯ ಮೇಲೆ ದಾಳಿ ನಡೆಸಿದಾಗ, 2 ವಸತಿ ಸಂಕೀರ್ಣ, 4 ನಿವೇಶನಗಳು, 880ಗ್ರಾಂ ಚಿನ್ನ, 4.148 ಕೆಜಿ ಬೆಳ್ಳಿ, ಮೂರು ಕಾರು, ಬೈಕ್, 4. 23 ಲಕ್ಷ ಬ್ಯಾಂಕ್‌ನಲ್ಲಿ ಠೇವಣಿ, 16.69 ಲಕ್ಷ ಗೃಹೋಪಯೋಗಿ ವಸ್ತುಗಳು ಕಂಡು ಬಂದಿವೆ.
ಮೈಸೂರು: ಮೈಸೂರು ಸಿಟಿ ಕಾಪೋರೇಷನ್ ವಾಟರ್ ಇನ್ಸ್‌ಪೆಕ್ಟರ್ ಟಿ.ಎಸ್.ಕೃಷ್ಣೇಗೌಡ ಅವರ ಆನಂದನಗರ, ಮೈಸೂರಿನ ವಾಸದ ಮನೆ ಹಾಗೂ ಒಂಟಿಕೊಪ್ಪಲುನಲ್ಲಿರುವ ಕಚೇರಿ ಮೇಲೆ ದಾಳಿ ನಡೆಸಿ ಕಾರ್ಯಾಚರಣೆ ಕೈಗೊಂಡಾಗ, ಮೈಸೂರಿನಲ್ಲಿ 2 ವಾಸದ ಮನೆ, ಒಂದು ನಿವೇಶನ, ತಿಪ್ಪೂರು ಗ್ರಾಮದಲ್ಲಿ 20 ಗುಂಟೆ ಭೂಮಿ, 532 ಗ್ರಾಂ ಚಿನ್ನ, 750 ಗ್ರಾಂ ಬೆಳ್ಳಿ, ಕಾರು, ಮೂರು ಬೈಕ್ ಹಾಗೂ 1 ಲಕ್ಷ ರೂ. ಪತ್ತೆಯಾಗಿದೆ.
ದಾವಣಗೆರೆಯ ಜಗಳೂರು ಗುರುಸಿದ್ದಪುರ ಗ್ರಾಮ ಪಂಚಾಯತ್ ಪಿಡಿಓ ನಾಗರಾಜ್ ಅವರು ನಾಲ್ಕು ಮನೆಗಳು ಸೇರಿ ಕಚೇರಿಗಳ ಮೇಲೆ ದಾಳಿ ನಡೆಸಿದಾಗ, ಎಸ್‌ಎಸ್ ಲೇಔಟ್‌ನಲ್ಲಿ 1 ವಾಸದ ಮನೆ, ವೆಂಕಟಾಪುರದ ವಿವಿಧ ಸರ್ವೇ ನಂಬರಗಳಲ್ಲಿ ಒಟ್ಟು 33.21 ಎಕರೆ ಭೂಮಿ, 586 ಗ್ರಾಂ ಚಿನ್ನ, 250 ಗ್ರಾಂ ಬೆಳ್ಳಿ, 2 ಕಾರು ಹಾಗೂ ನಾಲ್ಕು ಬೈಕ್, 2 ಮೊಬೈಲ್, 3 ಲಕ್ಷ ರೂ. ವೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ ಎಂದು ಎಸಿಬಿ ತಿಳಿಸಿದೆ.
ಎ.10ರಂದು ಎಸಿಬಿ ಅಧಿಕಾರಿಗಳು ರಾಜ್ಯದ 22 ಸ್ಥಳಗಳಲ್ಲಿ ಏಕಾಏಕಿ ಸರಕಾರಿ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಇನ್ನು ಆರು ಅಧಿಕಾರಿಗಳ ಪ್ರಕರಣಗಳಲ್ಲಿ ತನಿಖೆ ಮುಂದುವರೆದಿದ್ದು, ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯ ಸಂಗ್ರಹಣೆ ಮುಂದುವರೆದಿದೆ.







