ಒಂದು ಕ್ಷೇತ್ರದಲ್ಲಿ ಎಲ್ಲರಿಗೂ ಟಿಕೆಟ್ ನೀಡಲು ಆಗಲ್ಲ: ಕರಂದ್ಲಾಜೆ
ಉಡುಪಿ, ಎ.12: ಬಿಜೆಪಿಯ 72 ಅಭ್ಯರ್ಥಿಗಳ ಹೆಸರು ಘೋಷಣೆಯಾಗಿ ರುವ 10 ಕಡೆಗಳಲ್ಲಿ ಅಪೇಕ್ಷಿತರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಎಲ್ಲ ಪಕ್ಷಗಳಲ್ಲಿಯೂ ಒಂದೊಂದು ಕ್ಷೇತ್ರಗಳಲ್ಲಿ ಹಲವು ಮಂದಿ ಆಕಾಂಕ್ಷಿಗಳು ಇರುವುದು ಸಹಜ. ಆದರೆ ಟಿಕೆಟ್ ನೀಡಲು ಒಬ್ಬರಿಗೆ ಮಾತ್ರ ಸಾಧ್ಯ. ಈ ಅಸಮಾಧಾನ, ಬೇಸರ ಸ್ವಲ್ಪ ದಿನಗಳ ಕಾಲ ಮಾತ್ರ ಇರುತ್ತದೆ. ಮುಖಂಡರು ಎಲ್ಲವನ್ನು ಸರಿ ಮಾಡುತ್ತಾರೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂದಾ ಪುರ ಕ್ಷೇತ್ರದ ಅಭ್ಯರ್ಥಿಯ ಹೆಸರು ಕೂಡ ಘೋಷಣೆಯಾಗಿದೆ. ಇಲ್ಲಿಯೂ ಕೆಲವರು ಅಸಮಾಧಾನ ವ್ಯಕ್ತಪಡಿಸಿ, ರಾಜೀನಾಮೆ ನೀಡಿದ್ದಾರೆ. ಅವರೆಲ್ಲರನ್ನು ಕೂಡ ಕರೆದು ಸಮಾಧಾನ ಮಾಡಲಾಗುತ್ತದೆ. ಬಿಜೆಪಿಯ ಸರ್ವೇಯಂತೆ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾ ಗುತ್ತದೆ. ಮುಂದೆ ಸರಕಾರ ರಚನೆ ಯಾದ ನಂತರ ಉಳಿದವರಿಗೂ ಅವಕಾಶ ಮಾಡಿಕೊಡಲಾಗುತ್ತದೆ ಎಂದರು.
ಉಡುಪಿ ಕ್ಷೇತ್ರದಲ್ಲಿ ರಘುಪತಿ ಭಟ್‌ಗೆ ಟಿಕೆಟ್ ನೀಡಲು ಮನಸ್ಸಿಲ್ಲ ಎಂಬ ಕಾರಣಕ್ಕೆ ಹೆಸರು ಘೋಷಣೆಯನ್ನು ವಿಳಂಬ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲಾ ಹಾಗೂ ರಾಜ್ಯ ಮುಖಂಡರ ಅಭಿಪ್ರಾಯ ದಂತೆ ಕೇಂದ್ರ ನಾಯಕರು ಸರ್ವೆಯ ಆಧಾರದಲ್ಲಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಿದ್ದಾರೆ. ರೇಸ್‌ನಲ್ಲಿ ಮುಂದಿರುವ ಹಾಗೂ ಓಡುವ ಕುದುರೆಗೆ ಬಾಜಿ ಕಟ್ಟುವ ಕೆಲಸವನ್ನು ಪಕ್ಷ ಮಾಡುತ್ತಿದೆ. ಇದರಲ್ಲಿ ಸಂಸದರು, ಶಾಸಕರು, ಜಿಲ್ಲಾಧ್ಯಕ್ಷರ ವೈಯಕ್ತಿಕ ಅಭಿಪ್ರಾಯಕ್ಕೆ ಮನ್ನಣೆ ಇಲ್ಲ ಎಂದು ತಿಳಿಸಿದರು.







