ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ ಹೈಕೋರ್ಟ್
ವಿದ್ಯಾರ್ಥಿ ನಿಲಯಗಳಿಗೆ ಅಡುಗೆ, ಅಡುಗೆ ಸಹಾಯಕರ ಹುದ್ದೆ ನೇಮಕಾತಿ

ಬೆಂಗಳೂರು, ಎ.12: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಸಲಾಗುತ್ತಿರುವ ವಿದ್ಯಾರ್ಥಿ ನಿಲಯಗಳಿಗೆ 4,017 ಮಂದಿ ಅಡುಗೆಯವರು ಮತ್ತು ಅಡುಗೆ ಸಹಾಯಕರ ನೇಮಕಾತಿ ರದ್ದುಪಡಿಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ತಡೆ ನೀಡಲು ವಿಭಾಗೀಯ ನ್ಯಾಯಪೀಠ ನಿರಾಕರಿಸಿದೆ.
ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿ ಸಲ್ಲಿಸಿರುವ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ, ಪ್ರತಿವಾದಿಗಳಾದ ರತ್ನಮ್ಮ ಸೇರಿದಂತೆ 58 ಜನರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.
ನೇಮಕಾತಿಗೆ ಹೊರಡಿಸಿದ ಅಧಿಸೂಚನೆಯಲ್ಲಿ ಹತ್ತನೇ ತರಗತಿ ಪಾಸು ಮಾಡಿದವರು ಹುದ್ದೆಗೆ ಅರ್ಹರು ಎಂದು ತಿಳಿಸಲಾಗಿದೆ. ಆದರೆ, ಹಿಂದುಳಿದ ವರ್ಗಗಳ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಏಳನೆ ತರಗತಿ ಪಾಸು ಮಾಡಿದವರು ಅರ್ಹರು ಎಂದು ತಿಳಿಸಲಾಗಿದೆ. ಆದರೆ, ಈಗಿನ ನೇಮಕಾತಿ ಈ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಪ್ರತಿವಾದಿಗಳು ಆಕ್ಷೇಪಿಸಿದ್ದರು.
ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ, ನಿಯಮಗಳಿಗೆ ಶೀಘ್ರ ತಿದ್ದುಪಡಿ ತರಲಾಗುವುದು. ಹೀಗಾಗಿ, ಏಕಸದಸ್ಯ ನ್ಯಾಯಪೀಠದ ಆದೇಶ ರದ್ದುಗೊಳಿಸಬೇಕು ಎಂದು ಕೋರಿದರು.
ಇದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ದಿನೇಶ್ ಮಾಹೇಶ್ವರಿ, ನೇಮಕಾತಿ ನಿರ್ಧಾರ ಸರಿ ಎನ್ನಬಹುದು. ಆದರೆ, ಏಳನೇ ತರಗತಿ ಪಾಸು ಮಾಡಿದವರ ಹಕ್ಕುಗಳನ್ನು ಕಿತ್ತುಕೊಂಡಂತಾಗುವುದಿಲ್ಲವೇ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು. ವಿಚಾರಣೆಯನ್ನು ಇದೇ 25ಕ್ಕೆ ಮುಂದೂಡಲಾಗಿದೆ.







