ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಒಟ್ಟಿಗೆ ಬೇಸಿಗೆ ರಜೆ ಕೊಡಲು ಎಐಟಿಯುಸಿ ಆಗ್ರಹ
ಬೆಂಗಳೂರು, ಎ.12: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಬೇಸಿಗೆ ರಜೆಯನ್ನು ಒಟ್ಟಿಗೆ ಪಡೆಯುವ ಸೌಲಭ್ಯವನ್ನು ಹಿಂಪಡೆದಿರುವ ರಾಜ್ಯ ಸರಕಾರ ಕ್ರಮವನ್ನು ಎಐಟಿಯುಸಿ ಖಂಡಿಸಿದೆ.
ಪ್ರತಿವರ್ಷ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ 15ದಿನ ಒಟ್ಟಿಗೆ ಬೇಸಿಗೆ ರಜೆಯನ್ನು ಕೊಡಲಾಗುತ್ತಿತ್ತು. ಈ 15ದಿನದ ರಜೆಯಲ್ಲಿ ಅಂಗನವಾಡಿಗೆ ಬರುವ ಮಕ್ಕಳಿಗೆ ಅವರ ಮನೆಗಳಿಗೆ ಆಹಾರಧಾನ್ಯಗಳನ್ನು ಒದಗಿಸಲಾಗುತ್ತಿತ್ತು. ಆದರೆ, ಈ ವರ್ಷ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಪ್ರತ್ಯೇಕವಾಗಿ ಬೇಸಿಗೆ ರಜೆ ನೀಡುವ ಮೂಲಕ ಸಮಸ್ಯೆಗೆ ಈಡು ಮಾಡುಲಾಗುತ್ತಿದೆ.
ಅಂಗನವಾಡಿ ಕಾರ್ಯಕರ್ತೆಯರು ಬೇಸಿಗೆ ರಜೆಯಲ್ಲಿದ್ದಾಗ ಅಂಗನವಾಡಿ ಸಹಾಯಕಿಯರೆ ಅಂಗನವಾಡಿಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗುತ್ತದೆ. ಇದರಿಂದ ಮಕ್ಕಳ ನಿರ್ವಹಣೆ, ಆಹಾರ ತಯಾರಿಕೆ ಎಲ್ಲವೂ ಸಾಧ್ಯವಾಗುವುದಿಲ್ಲ. ಹಾಗೆಯೆ ಅಂಗನವಾಡಿ ಸಹಾಯಕಿಯರು ರಜೆಯಲ್ಲಿದ್ದಾಗ ಕಾರ್ಯಕರ್ತೆ ಒಬ್ಬರೆ ಅಂಗನವಾಡಿಯನ್ನು ನೋಡಿಕೊಳ್ಳಲು ಸಾಧ್ಯವಿಲ್ಲವೆಂದು ಎಐಯುಟಿಸಿ ಕಾರ್ಯದರ್ಶಿ ಜಯಮ್ಮ ತಿಳಿಸಿದ್ದಾರೆ.
ಮಾತೃಪೂರ್ಣ ಯೋಜನೆಯಿಂದಾಗಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಒಟ್ಟಿಗೆ ರಜೆ ಸಿಗುತ್ತಿಲ್ಲ. ಆದರೆ, ಬೇಸಿಗೆಯಲ್ಲಿ ಗರ್ಭಿಣಿ, ಬಾಣಂತಿ ಹಾಗೂ ಮಕ್ಕಳು ಅಂಗನವಾಡಿಗೆ ಬರುವುದು ಕಡಿಮೆ. ಹೀಗಾಗಿ ವಿನಾಕಾರಣ ತೊಂದರೆ ಕೊಡದೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಒಟ್ಟಿಗೆ 15ದಿನ ರಜೆ ಕೊಡಬೇಕೆಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಅಗ್ರಹಿಸಿದ್ದಾರೆ.







