ಹರಪನಹಳ್ಳಿ: ಬಾಲ್ಯ ವಿವಾಹಕ್ಕೆ ತಡೆ

ಹರಪನಹಳ್ಳಿ,ಎ.12: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ವಿವಾಹ ಮಾಡಿಸಲು ಮುಂದಾದ ಪೋಷಕರ ಮನವೊಲಿಸಿ, ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿದ ಘಟನೆ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಕೆ.ಕಲ್ಲಹಳ್ಳಿ ಗ್ರಾಮದ ಪ್ರಕಾಶ್ ಹಾಗೂ ಕೆಂಚಮ್ಮ ಎಂಬುವವರ ಪುತ್ರಿ ಹಾಗೂ ಹುಲಿಕಟ್ಟಿ ಗ್ರಾಮದ ಲೇಟ್ ಹನುಮಂತಪ್ಪರ ಮಗ ಜೆ.ಬಸವರಾಜ ಎಂಬವರಿಗೆ ವಿವಾಹ ನಿಗದಿಗೊಳಿಸಿತ್ತು. ಎರಡೂ ಕಡೆಯವರು ಮದುವೆಗೆ ಎಲ್ಲಾ ಸಿದ್ದತೆ ಮಾಡಿಕೊಂಡು ಎ.11ರಂದು ಬೆಳಗ್ಗೆ ವರನ ಸ್ವಗೃಹದಲ್ಲಿ ವಿವಾಹ ನಡೆಸಲು ತೀರ್ಮಾನಿಸಿದ್ದಾರೆ, ಆದರೆ ಹುಡುಗಿಯ ವಯಸ್ಸು ಶಾಲಾ ದಾಖಲೆಯ ಪ್ರಕಾರ ಕೇವಲ 15 ವರ್ಷ ಆಗಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಬುಧುವಾರ ನಡೆಯಬೇಕಾಗಿದ್ದ ವಿವಾಹವನ್ನು ಅಧಿಕಾರಿಗಳು, ಗ್ರಾಮಸ್ಥರು ಮಂಗಳವಾರ ರಾತ್ರಿಯೇ ತಡೆದಿದ್ದಾರೆ.
ನಂತರ ಇಬ್ಬರು ಕಡೆಯವರ ಪೋಷಕರನ್ನು ಮುಂದಿನ ಕ್ರಮಕ್ಕಾಗಿ ದಾವಣಗೆರೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ, ಪೋಷಕರಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. ಹುಡುಗಿಗೆ 18 ವರ್ಷ ತುಂಬಿದ ನಂತರ ಮದುವೆ ಮಾಡಿಕೊಡುವುದಾಗಿ ಒಪ್ಪಿ ಅಧಿಕಾರಿಗಳಿಗೆ ಮುಚ್ಚಳಿಕೆ ಪತ್ರವನ್ನು ಬರೆದುಕೊಟ್ಟಿದ್ದಾರೆ.
ಜಿಲ್ಲಾ ಮಕ್ಕಳ ಕಲ್ಯಾಣ ರಕ್ಷಣಾಧಿಕಾರಿ ಕೆ.ಎಚ್. ವಿಜಯಕುಮಾರ, ಜಿಲ್ಲ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರಾಮನಾಯ್ಕ, ಸದಸ್ಯರಾದ ಎಲ್.ಮಂಜುನಾಥ, ಅಮೀರಬಾನು, ಶಿಶು ಅಭಿವೃದ್ಧಿ ಯೋಜನಾಕಾರಿ ಮಹಾಂತಸ್ವಾಮಿ, ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾಧಿಕಾರಿ ಕೆ.ಪಿ.ದೇವರಾಜ, ತಾಪಂ ಸದಸ್ಯ ಹೆಚ್.ಚಂದ್ರಪ್ಪ, ಪೋಲಿಸ್ ಅಧಿಕಾರಿ ಅಪ್ಪಣ್ಣರೆಡ್ಡಿ, ವರನ ಹಾಗೂ ವಧುವಿನ ಕಡೆಯ ಪೋಷಕರು, ನೇಸಾರ್ ಸಂಸ್ಥೆಯ ಕಾರ್ಯಕರ್ತ ಎಚ್.ಎಂ.ರಮೇಶ್, ಗ್ರಾಮಸ್ಥರಾದ ಪಿ.ಗಂಗಾಧರಪ್ಪ, ಬಿ.ಕೃಷ್ಣಪ್ಪ, ಟಿ.ಹೋಮ್ಯಪ್ಪ, ಹೊಳಿಯಪ್ಪ, ಶಿವನಂದಪ್ಪ ಇದ್ದರು.







