ಮಿಂಚಿನ ನೊಂದಣಿ ಅಭಿಯಾನದಲ್ಲಿ 33416 ಮತದಾರರ ಸೇರ್ಪಡೆ: ಮೈಸೂರು ಜಿಲ್ಲಾಧಿಕಾರಿ

ಮೈಸೂರು,ಎ.12: ಮಿಂಚಿನ ನೊಂದಣಿ ಅಭಿಯಾನಕ್ಕೆ ನಿರೀಕ್ಷೆಗೂ ಮೀರಿದ ಬೆಂಬಲ ದೊರೆತಿದ್ದು, ಅಭಿಯಾನದಲ್ಲಿ ಹೊಸದಾಗಿ 33416 ಮತದಾರರು ಸೇರ್ಪಡೆಯಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನೊಂದಣಿ ಅಭಿಯಾನಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಹೊಸದಾಗಿ 33416 ಮತದಾರರು ಸೇರ್ಪಡೆಯಾದರೆ, ಅಭಿಯಾನದಲ್ಲಿ 1528 ಮತದಾರರ ಪರಿಷ್ಕರಣೆ ಮಾಡಲಾಗಿದೆ ಎಂದು ಹೇಳಿದರು.
ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ108 ಪ್ರಕರಣಗಳು ದಾಖಲಾಗಿವೆ. ಈಗಾಗಲೇ 71ಪ್ರಕರಣಗಳು ಇತ್ಯರ್ಥವಾಗಿವೆ. 18 ಸಾವಿರ ಚುನಾವಣಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಒಟ್ಟಾರೆ 386 ರೈಡ್ ಗಳು ನಡೆದಿದ್ದು, 69 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ, 2.33ಲಕ್ಷ ಮೌಲ್ಯದ ಮದ್ಯ, 5 ಲಕ್ಷ ಮೌಲ್ಯದ ಚಿನ್ನ, 7.48 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಕಾರು, ಬೈಕ್ ಸೇರಿದಂತೆ 8 ವಾಹನಗಳು, ಹಾಗೂ 8.18 ಕೋ.ರೂ ಮೌಲ್ಯದ ವಸ್ತುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಹುಣಸೂರಿನ ಫೇಸ್‍ಬುಕ್ ಪ್ರಕರಣದ ಮೇಲೆ ಈಗಾಗಲೇ ಎಫ್‍ಐಆರ್ ದಾಖಲಾಗಿದೆ. ಕೆ.ಆರ್ ನಗರದಲ್ಲಿ ಹಣ ಹಂಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಿಸಲಾಗಿದೆ ಎಂದರು.
ಇನ್ನು ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಪೊಲೀಸರು ಪಥಸಂಚಲನ ನಡೆಸುತ್ತಿದ್ದಾರೆ. ಚುನಾವಣೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕೆಲವು ಕಡೆ ಖುದ್ದು ನಾನೇ ಚೆಕ್ ಪೋಸ್ಟ್ ಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ ಎಂದು ತಿಳಿಸಿದರು. ಈಗಾಗಲೇ ಐದು ಸಾವಿರ ಮೀಸಲು ಚುನಾವಣಾ ಸಿಬ್ಬಂದಿ ಸಜ್ಜಾಗುತ್ತಿದ್ದು, ತರಬೇತಿ ನೀಡಲಾಗುತ್ತಿದೆ. ಉಳಿದಂತೆ ಇನ್ನೂ ಕೆಲವೇ ದಿನಗಳಲ್ಲಿ ಪೊಲೀಸ್, ಸಶಸ್ತ್ರ ಮೀಸಲುಪಡೆ, ಹಾಗೂ ಚುನಾವಣಾ ಸಿಬ್ಬಂದಿ ನೇಮಕ ಖಚಿತಪಡಿಸಲಾಗುವುದು. ಸುಲಲಿತವಾಗಿ ಚುನಾವಣೆ ನಡೆಸಲು ಜಿಲ್ಲಾಡಳಿತ ಸಜ್ಜಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.







