‘ಅಪ್ಪೆ ಟೀಚರ್’ ತುಳು ಚಿತ್ರಕ್ಕೆ ಪ್ರೇಕ್ಷಕರಿಂದ ಅತ್ಯುತ್ತಮ ಸ್ಪಂದನೆ
ಮಂಗಳೂರು, ಎ.12: ಸ್ವಯಂಪ್ರಭ ಎಂಟರ್‌ಟೈನ್‌ಮೆಂಟ್ ಆ್ಯಂಡ್ ಪ್ರೊಡಕ್ಷನ್ ಸಂಸ್ಥೆ ನಿರ್ಮಿಸುತ್ತಿರುವ, ಕಿಶೋರ್ ಮೂಡುಬಿದಿರೆ ಚಿತ್ರ ನಿರ್ದೇಶನದ ‘ಅಪ್ಪೆಟೀಚರ್’ ಸಿನೆಮಾವು ಭರ್ಜರಿ ಪ್ರದರ್ಶನ ಕಾಣುತ್ತಿವೆ. ಈ ಚಿತ್ರವನ್ನು ಮೊದಲ 3 ವಾರಗಳಲ್ಲಿ 1.72 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಭರ್ಜರಿ 1.71 ಕೋ.ರೂ ಕಲೆಕ್ಷನ್ ಪಡೆದಿದೆ.
ಇದರಲ್ಲಿ 95.81 ಲಕ್ಷ ರೂ. ಮಲ್ಟಿಪ್ಲೆಕ್ಸ್‌ಗಳಿಂದ ಹಾಗೂ 75.23 ಲಕ್ಷ ರೂ.ಇತರೆ ಟಾಕೀಸುಗಳಿಂದ ಕಲೆಕ್ಷನ್ ಆಗಿದೆ. ಸೀಮಿತ ಮಾರುಕಟ್ಟೆಯ ತುಳು ಚಿತ್ರರಂಗದಲ್ಲಿ ಈ ತರಹ ವೀಕ್ಷಕರನ್ನು ಸೆಳೆಯಬಹುದು ಮತ್ತು ಉತ್ತಮ ಸಿನೆಮಾ ಕೊಟ್ಟರೆ ತುಳು ಸಿನೆಮಾಕ್ಕೂ ಒಳ್ಳೆಯ ಮಾರುಕಟ್ಟೆ ಇದೆ ಎಂಬುವುದನ್ನು ‘ಅಪ್ಪೆಟೀಚರ್’ ಸಾಬೀತುಪಡಿಸಿವೆ.
ವೀಕ್ಷಕರಲ್ಲಿ ಮಹಿಳೆಯರೇ ಹೆಚ್ಚಾಗಿದ್ದು, ಮಹಿಳಾ ವೀಕ್ಷಕರ ಮನ ಗೆಲ್ಲುವಲ್ಲಿ ಸಿನಿಮಾ ಯಶಸ್ವಿಯಾಗಿದೆ. ಚಿತ್ರತಂಡ ಹೇಳುವ ಪ್ರಕಾರ ಯಾವ ಸಿನೆಮಾಕ್ಕೆ ಜನರು ಕುಟುಂಬ ಸಮೇತರಾಗಿ ಬರುತ್ತಾರೋ, ಆ ಸಿನೆಮಾ ಜನರನ್ನು ಸೆಳೆದಿದೆ ಎಂದು ಅರ್ಥ. ಆ ನಿಟ್ಟಿನಲ್ಲಿ ನಾವು ಯಶಸ್ವಿಯಾಗಿದ್ದೇವೆ. ಈಗಾಗಲೇ ಪರೀಕ್ಷೆಗಳು ಮುಗಿದಿದ್ದು, ಮುಂದಿನ ದಿನಗಳಲ್ಲಿ ವೀಕ್ಷಕರ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ. ಚಿತ್ರದ ನಿರ್ದೇಶಕ ಕಿಶೋರ್ ಮೂಡುಬಿದಿರೆಯವರ ಪ್ರಕಾರ ತುಳು ಚಿತ್ರರಂಗದಲ್ಲಿ ಇಲ್ಲಿಯವರೆಗೆ ಯಾರೂ ಆಯ್ಕೆ ಮಾಡದ ಕಥೆ, ಆರಂಭದಿಂದ ಅಂತ್ಯದವರೆಗೂ ನಕ್ಕು ನಗಿಸುವ ಹಾಸ್ಯ, ಸೂಕ್ತ ಹಾಗೂ ಪ್ರಬುದ್ಧ ಕಲಾವಿದರ ಆಯ್ಕೆ, ಕಲಾವಿದರನ್ನು ಸಮರ್ಥವಾಗಿ ಬಳಸಿರುವುದು, ಇದಕ್ಕಿಂತ ಹೆಚ್ಚಾಗಿ ನಾಟಕದ ಚೌಕಟ್ಟಿನಿಂದ ಹೊರಬಂದು ಅಪ್ಪಟ ದೃಶ್ಯಗಳ ಮೂಲಕ ಕಥೆಯನ್ನು ಪೋಣಿಸಿರುವುದು, ಅದ್ಭುತ ಹಿನ್ನ್ನೆಲೆ ಸಂಗೀತವೇ ಸಿನೆಮಾದ ಗೆಲುವಿನ ಗುಟ್ಟು ಎನ್ನುತ್ತಾರೆ. ಅಲ್ಲದೆ ತುಳು ಸಿನೆಮಾ ನೋಡುಗರು ಹಿಂದಿ, ಕನ್ನಡ, ಇಂಗ್ಲಿಷ್ ಸಿನೆಮಾ ನೋಡುವವರಾಗಿದ್ದು, ಸಿನೆಮಾ ತಾಂತ್ರಿಕತೆಯ ಬಗ್ಗೆ ಆಳವಾದ ಜ್ಞಾನ ಹೊಂದಿದ್ದು ಹಾಗಾಗಿ ನಾವೆಲ್ಲೂ ಸಿನೆಮಾ ತಾಂತ್ರಿಕ ವೈಭವಕ್ಕೆ ಧಕ್ಕೆ ಬಾರದ ಹಾಗೆ ಏನೆಲ್ಲಾ ಬೇಕೋ ಅದನ್ನು ಒದಗಿಸಿದ್ದೇವೆ. ಹಾಗಾಗಿ ಸಿನೆಮಾ ಗೆದ್ದಿದೆ, ಜನರನ್ನು ರಂಜಿಸಿದೆ ಎಂದು ನಿರ್ಮಾಪಕ ಕೆ.ರತ್ನಾಕರ್ ಕಾಮತ್ ಪತ್ರಿಕೆಗೆ ತಿಳಿಸಿದ್ದಾರೆ.
ತಾರಾಗಣದಲ್ಲಿ ದೇವದಾಸ್ ಕಾಪಿಕಾಡ್, ಬೋಜರಾಜ್ ವಾಮಂಜೂರ್, ನವೀನ್ ಡಿ.ಪಡೀಲ್, ಅರವಿಂದ್ ಬೋಳಾರ್, ಗೋಪಿನಾಥ್ ಭಟ್, ಉಷಾ ಭಂಡಾರಿ, ನಾಯಕನಾಗಿ ಸುನೀಲ್, ಉಮೇಶ್ ಮಿಜಾರ್ ಮುಂತಾದವರಿದ್ದು, ಚಂಡಿಕೋರಿ ಸಿನೆಮಾದ ನಾಯಕಿ ಕರೀಷ್ಮಾ ಅಮೀನ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.
‘ಅಪ್ಪೆಟೀಚರ್’ ಈಗಾಗಲೇ ತುಂಬಿದ ಗೃಹದೊಂದಿಗೆ ಪ್ರದರ್ಶನ ಕಾಣುತ್ತಿದ್ದು, 25ನೇ ದಿನದತ್ತ ಸಾಗುತ್ತಿದೆ. ಮುಂದಿನ ವಾರ ಮಡಿಕೇರಿಯ ಕಾವೇರಿ ಥಿಯೇಟರ್‌ನಲ್ಲಿ ಹಾಗೂ ಬಳಿಕ, ಮೂಡಿಗೆರೆ, ಕೊಪ್ಪ, ಶಿವಮೊಗ್ಗ, ಕಾಸರಗೋಡು ಹಾಗೂ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಕೆ.ರತ್ನಾಕರ್ ಕಾಮತ್ ತಿಳಿಸಿದ್ದಾರೆ.







