ಸುಳ್ಳು ಸುದ್ದಿ ಪ್ರಕರಣ: ಪೋಸ್ಟ್‌ಕಾರ್ಡ್ ಸ್ಥಾಪಕನ ವಿರುದ್ಧ ತನಿಖೆಗೆ ನ್ಯಾಯಾಲಯದಿಂದ ತಡೆ

ಬೆಂಗಳೂರು, ಎ.12: ಪೋಸ್ಟ್‌ಕಾರ್ಡ್ ನ್ಯೂಸ್ ಆನ್‌ಲೈನ್ ಸುದ್ದಿ ಜಾಲತಾಣದ ಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆ ವಿರುದ್ಧ ಕೋಮು ಸೌಹಾರ್ದ ಕೆಡಿಸುವ ಉದ್ದೇಶದಿಂದ ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪದಡಿ ಕೇಂದ್ರ ಕ್ರೈಂ ಬ್ರಾಂಚ್ (ಸಿಸಿಬಿ) ನಡೆಸುತ್ತಿರುವ ತನಿಖೆಗೆ ಕರ್ನಾಟಕ ಉಚ್ಚ ನ್ಯಾಯಾಲಯ ಎಪ್ರಿಲ್ 25ರವರೆಗೆ ತಡೆ ವಿಧಿಸಿದೆ.
ಮಹೇಶ್ ವಿಕ್ರಂ ಹೆಗ್ಡೆಯನ್ನು ಸಿಸಿಬಿ ಪೊಲೀಸರು ಮಾರ್ಚ್ 29ರಂದು ಬಂಧಿಸಿದ್ದರು. ಜೈನ ಮುನಿಗೆ ಮುಸ್ಲಿಂ ಯುವಕ ಹಲ್ಲೆ ನಡೆಸಿದ್ದಾನೆ ಎಂಬ ಸುಳ್ಳು ಸುದ್ದಿಯನ್ನು ಮಾರ್ಚ್ 18ರಂದು ಪೋಸ್ಟ್ ಕಾರ್ಡ್ ನ್ಯೂಸ್ ಪ್ರಕಟಿಸಿತ್ತು. ಸುಳ್ಳಿ ಸುದ್ದಿ ಹರಡಿ ಸಾಮಾಜಿಕ ಸಾಮರಸ್ಯ ಕದಡಲು ಯತ್ನಿಸಿದ ಹೆಗ್ಡೆಯನ್ನು ಬಂಧಿಸಲಾಗಿತ್ತು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಶ್ರವಣಬೆಳಗೊಳದಿಂದ ಉತ್ಸವ ಮುಗಿಸಿ ಆಗಮಿಸಿದ್ದ ಜೈನ ಮುನಿಗೆ ಮಾರ್ಚ್ 13ರಂದು ನಡೆದ ಅಪಘಾತದಲ್ಲಿ ಗಾಯಗಳಾಗಿದ್ದವು. ಜೈನ ಮುನಿಗೆ ಗಾಯವಾದ ಫೋಟೊವನ್ನು ತನ್ನ ಜಾಲತಾಣದಲ್ಲಿ ಹಾಕಿದ ಪೋಸ್ಟ್ ಕಾರ್ಡ್ ನ್ಯೂಸ್ ಮುಸ್ಲಿಂ ಯುವಕರು ಜೈನಮುನಿಗೆ ಹಲ್ಲೆ ನಡೆಸಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಹರಡಿತ್ತು. ಹೆಗ್ಡೆ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 153ಎ, 34 ಮತ್ತು 120ಬಿ ಅಡಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ 66ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.







