ಮೈಸೂರು: ವಿರೋಧ ಪಕ್ಷಗಳಿಂದ ಸಂಸತ್ ಕಲಾಪ ವ್ಯರ್ಥ ಖಂಡಿಸಿ ಬಿಜೆಪಿ ಪ್ರತಿಭಟನೆ

ಮೈಸೂರು,ಎ.12: ವಿರೋಧ ಪಕ್ಷಗಳು ಸಂಸತ್ ಕಲಾಪ ವ್ಯರ್ಥ ಮಾಡಿರುವುದನ್ನು ಖಂಡಿಸಿ, ಪ್ರಧಾನ ಮಂತ್ರಿ ನರೇಂದ್ರ ಮೋದಿರವರ ಕರೆಗೆ ಓಗೊಟ್ಟು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಬಿಜೆಪಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಯುಪಿಎ ಸರ್ಕಾರದಲ್ಲಿ ಅಭಿವೃದ್ಧಿಯಾಗದಿರುವುದನ್ನು ಮನಗಂಡ ಜನರು, ಬಿಜೆಪಿಗೆ ಸ್ಪಷ್ಟ ಬಹುಮತ ಕೊಟ್ಟಿದ್ದಾರೆ. ಕಾಂಗ್ರೆಸ್ ಮೊದಲ ದಿನದಿಂದಲೂ ಕಲಾಪಕ್ಕೆ ಅಡ್ಡಿಪಡಿಸುತ್ತಿದೆ. ಈ ಬಾರಿ ಬಜೆಟ್ ನಂತರ ತಿಂಗಳ ಕಾಲ ಅಧಿವೇಶನಕ್ಕೆ ಬಾರದೆ ಅಭಿವೃದ್ಧಿಗೆ ತೊಡಕಾಗಿದೆ. ಕಾಂಗ್ರೆಸ್ ನ ಈ ಬುದ್ಧಿ ನೋಡಿ ಜನ 44 ಕ್ಕೆ ಇಳಿಸುತ್ತಿದ್ದಾರೆ. ಇದೇ ಬುದ್ಧಿಯನ್ನು ಮುಂದುವರಿಸಿದರೆ ಹೀನಾಯ ಸ್ಥಿತಿಗೆ ತಲುಪಿಸುತ್ತಾರೆ. ವಿರೋಧ ಪಕ್ಷಗಳ ನಡೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ. 23 ದಿನಗಳ ಕಲಾಪದ ಹಣ ಪಡೆಯುತ್ತಿಲ್ಲ, ಜನರು ಎಲ್ಲವನ್ನೂ ಗಮನಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಮಂಜುನಾಥ್, ಮಾಜಿ ಸಚಿವ ರಾಮದಾಸ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.





