ಚಿಕ್ಕಮಗಳೂರು: ಪೌರ ಕಾರ್ಮಿಕರ ಮೇಲೆ ಹಲ್ಲೆ ಆರೋಪ; ದೂರು ದಾಖಲು
ಚಿಕ್ಕಮಗಳೂರು, ಎ.12: ನಗರದ ಸ್ವಚ್ಚತಾ ಕಾರ್ಯನಿರ್ವಹಿಸುವ ಪೌರಕಾರ್ಮಿಕರ ಮೇಲೆ ಹಲ್ಲೆ ನಡೆಸಿ ಅವ್ಯಾಚ್ಯವಾಗಿ ನಿಂದಿಸಿರುವ ಘಟನೆ ಮುಂಜಾನೆ ಮಾರ್ಕೇಟ್ ರಸ್ತೆಯ ಜ್ಯೋತಿ ವೃತ್ತದಲ್ಲಿ ನಡೆದಿದೆ ಎನ್ನಲಾಗಿದೆ.
ನಗರದ ಮಾರ್ಕೆಟ್ ರಸ್ತೆಯ ಜ್ಯೋತಿ ವೃತ್ತದಲ್ಲಿ ಕಸ ವಿಲೇಮಾಡಿದರೂ ಸಹ ಸ್ಥಳೀಯರು ತಮ್ಮ ಮನೆ ಕಸವನ್ನು ಗಾಡಿಗೆ ಹಾಕದೇ ರಸ್ತೆಗೆ ತಂದು ಕಸ ಹಾಕುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪೌರಾಯುಕ್ತರ ಸೂಚನೆಯ ಮೇರೆಗೆ ಪೌರಸೇವಾ ನೌಕರರಾದ ನಾಗರಾಜು ಮತ್ತು ಕುಮಾರ್ ಎಂಬುವವರು ಕಸ ಹಾಕುವರು ಯಾರು ಎಂದು ಪತ್ತೆ ಹಚ್ಚಲು ಗುರವಾರ ಮುಂಜಾನೆ ಸ್ಥಳದಲ್ಲಿದ್ದರು ಎನ್ನಲಾಗಿದೆ.
ಸ್ಥಳೀಯರಾದ ಅನ್ವರ್ ಎಂಬುವರು ಮನೆ ಕಸವನ್ನು ಎಸೆಯಲು ಬಂದ ಸಂದರ್ಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಕುಮಾರ ಮತ್ತು ನಾಗರಾಜುರವರನ್ನು ಅವ್ಯಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಮದು ಆರೋಪಿಸಲಾಗಿದ್ದು, ಹಲ್ಲೆಗೊಳಗಾದ ನಾಗರಾಜು ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕಾಗಮಿಸಿದ ಪೌರಾಯುಕ್ತೆ ತುಷಾರಮಣಿ ಹಲ್ಲೆ ನಡೆಸಿದ ವ್ಯಕ್ತಿಗಳ ವಿರುದ್ದ ನಗರಠಾಣೆಗೆ ದೂರು ನೀಡಿದ್ದು, ಪೋಲೀಸರು ದೂರು ದಾಖಲಿಸಿಕೊಂಡು ಕ್ರಮ ಜರುಗಿಸಿದ್ದಾರೆ.







