ಶಿವಮೊಗ್ಗ: ಎಪ್ರಿಲ್ 14 ರಿಂದ ವಿಶ್ವಮಾನವ ಅಂತರಾಷ್ಟ್ರೀಯ ರಂಗೋತ್ಸವ
ಶಿವಮೊಗ್ಗ, ಏ. 11: ರಂಗಾಯಣ ಶಿವಮೊಗ್ಗ ಘಟಕವು ಎಪ್ರಿಲ್ 14ರಿಂದ 20 ರವರೆಗೆ ಒಟ್ಟು 07 ದಿನಗಳ ಕಾಲ ರಾಷ್ಟ್ರಕವಿ ಕುವೆಂಪು ಅವರ ಸವಿನೆನಪಿಗಾಗಿ ವಿಶ್ವಮಾನವ ಅಂತರಾಷ್ಟ್ರೀಯ ರಂಗೋತ್ಸವವನ್ನು ಏರ್ಪಡಿಸಿದ್ದು, ಈ ಎಲ್ಲಾ ಕಾರ್ಯಕ್ರಮಗಳಲ್ಲಿ ರಂಗಾಸಕ್ತರು ತಮ್ಮ ಮಕ್ಕಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ರಂಗಾಯಣ ಅಧ್ಯಕ್ಷ ಡಾ.ಎಂ.ಗಣೇಶ್ ಅವರು ತಿಳಿಸಿದ್ದಾರೆ.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ಈ ರಂಗೋತ್ಸವದಲ್ಲಿ ವಿಶ್ವದ ವಿವಿಧ ಪ್ರಕಾರಗಳ ಬಹುಭಾಷಾ ನಾಟಕಗಳು, ತೃತೀಯ ಲಿಂಗಿಗಳು ಮತ್ತು ಮಹಿಳೆಯರ ಏಕವ್ಯಕ್ತಿ ರಂಗ ಪ್ರದರ್ಶನಗಳು ಪ್ರದರ್ಶನಗೊಳ್ಳಲಿವೆ. ಇಷ್ಟೇ ಅಲ್ಲದೇ ಮಕ್ಕಳ ಸಿನಿಮೋತ್ಸವ, ಬಹುಭಾಷಾ ನಾಟಕಗಳ ಕುರಿತು ರಂಗ ಸಂವಾದ ಮತ್ತು ಮಕ್ಕಳ ಸಿನಿಮೋತ್ಸವ ಸಂವಾದ ಕಾರ್ಯಕ್ರಮಗಳು ನಡೆಯಲಿವೆ ಎಂದವರು ತಿಳಿಸಿದ್ದಾರೆ.
ಎಪ್ರಿಲ್ 14ರಂದು ಸಂಜೆ ರಂಗಾಯಣದ ರೆಪರ್ಟರಿ ಕಲಾವಿದರು ಅಭಿನಯಿಸುವ ಡಾ.ಎಂ.ಗಣೇಶ್ ನಿರ್ದೇಶನದ ಆಷಾಡದ ಒಂದು ದಿನ, ಎಪ್ರಿಲ್ 15ರಂದು ರಂಗಾಯಣದ ರೆಪರ್ಟರಿ ಕಲಾವಿದರು ಅಭಿನಯಿಸುವ ಸವಿತರಾಣಿ ನಿರ್ದೇಶನದ ಟ್ರಾನ್ಸ್‍ನೇಷನ್, ಎಪ್ರಿಲ್ 16ರಂದು ಕೊಚ್ಚಿಯ ಲೋಕಧರ್ಮಿ ರಂಗತಂಡದ ಕಲಾವಿದರು ಚಂದ್ರಹಾಸನ್ ನಿರ್ದೇಶನದ ಕರ್ಣಭಾರಂ, ಎಪ್ರಿಲ್ 17ರಂದು ಬೆಂಗಳೂರು ವಿಶ್ವವಿದ್ಯಾನಿಲಯದ ಕಲಾಮೈತ್ರಿ ಸಾಂಸ್ಕೃತಿಕ ವೇದಿಕೆ ಕಲಾವಿಭಾಗದ ಕಲಾವಿದರು ಮಂಟೇಸ್ವಾಮಿ ಕಥಾಪ್ರಸಂಗ, ಎಪ್ರಿಲ್ 18ರಂದು ಹೆಗ್ಗೋಡಿನ ಸತ್ಯಶೋಧನ ರಂಗಸಮುದಾಯದ ಕಲಾವಿದರು ಪ್ರಸ್ತುತಪಡಿಸುವ ಕುರುಕ್ಷೇತ್ರ, ಎಪ್ರಿಲ್ 19ರಂದು ಸಿಂಗಪುರದ ಇಂಟರ್ ನ್ಯಾಷನಲ್ ಥಿಯೇಟರ್ ಇನ್‍ಸ್ಟಿಟ್ಯೂಟ್‍ನ ಕಲಾವಿದರು ಪ್ರಸ್ತುತಪಡಿಸುವ ವೆನ್ ವಿ ಡೆಡ್ ಅವೇಕನ್ ಹಾಗೂ ಎಪ್ರಿಲ್ 20ರಂದು ಹರಪನಹಳ್ಳಿಯ ಏಕಲವ್ಯ ಸಾಂಸ್ಕೃತಿಕ ಕಲಾತಂಡದ ವತಿಯಿಂದ ಏಕಲವ್ಯ ನಾಟಕಗಳು ಪ್ರದರ್ಶನಗೊಳ್ಳಲಿವೆ. ಈ ರಂಗೋತ್ಸವದಲ್ಲಿ ನಡೆಯುವ ರಂಗಸಂವಾದ, ಏಕವ್ಯಕ್ತಿ ರಂಗಪ್ರದರ್ಶನ, ಮಕ್ಕಳ ಸಿನಿಮೋತ್ಸವಕ್ಕೆ ಉಚಿತ ಪ್ರವೇಶಾವಕಾಶವಿದೆ. ಉಳಿದಂತೆ ಪ್ರತಿದಿನ ಸಂಜೆ ನಡೆಯುವ ಪ್ರತಿ ನಾಟಕಕ್ಕೆ ರೂ.20/-ಗಳ ಪ್ರವೇಶ ಶುಲ್ಕ ನಿಗಧಿಪಡಿಸಲಾಗಿದೆ ಎಂದರು.
ಪ್ರತಿದಿನ ಸಂಜೆ ಪ್ರದರ್ಶಿತಗೊಳ್ಳುವ ನಾಟಕಗಳ ಕುರಿತು ಮರುದಿನ ಬೆಳಿಗ್ಗೆ 10ಗಂಟೆಗೆ ಬಹುಭಾಷಾ ನಾಟಕಗಳ ರಂಗಸಂವಾದ ನಡೆಯಲಿದೆ. ಎಪ್ರಿಲ್ 15ರಂದು ಆಷಾಡದ ಒಂದು ದಿನ ನಾಟಕದ ಕುರಿತು ಮಲ್ಲಿಕಾರ್ಜುನ ಕಡಕೋಳ ಇವರ ಸಮನ್ವಯತೆಯಲ್ಲಿ ಸಂವಾದ ನಡೆಯಲಿದೆ. ಎಪ್ರಿಲ್ 16ರಂದು ಪ್ರಸನ್ನ ಅವರು ಸಮನ್ವಯಕಾರರಾಗಿ ಭಾಗವಹಿಸಿ ಟ್ರಾನ್ಸ್‍ನೇಷನ್ ಎಂಬ ನಾಟಕದ ಕುರಿತು, ಎಪ್ರಿಲ್ 17ರಂದು ಗೌರಿಶಂಕರ್ ಅವರು ಸಮನ್ವಯಕಾರರಾಗಿ ಆಗಮಿಸಿ ಮಲಯಾಳಂ ಭಾಷೆಯ ಕರ್ಣಭಾರಂ ಎಂಬ ನಾಟಕದ ಕುರಿತು, ಎಪ್ರಿಲ್ 18ರಂದು ಆರ್.ಎಸ್.ಗಿರಿ ಅವರು ಮಂಟೇಸ್ವಾಮಿ ಕಥಾಪ್ರಸಂಗದ ಕುರಿತು, ಎಪ್ರಿಲ್ 19ರಂದು ಸತೀಶ್ ತಿಪಟೂರು ಅವರು ಕುರುಕ್ಷೇತ್ರ ನಾಟಕದ ಕುರಿತು, ಎಪ್ರಿಲ್ 20ರಂದು ಪಿ.ಹೆಚ್.ಲವ ಅವರು ವೆನ್ ವಿ ಡೆಡ್ ಅವೇಕನ್ ಎಂಬ ಆಂಗ್ಲ ನಾಟಕದ ಕುರಿತು ಹಾಗೂ ಅಂದೇ ಕಾಂತೇಶ ಕದರಮಂಡಲಗಿ ಅವರು ಸಮನ್ವಯಕಾರರಾಗಿ ಭಾಗವಹಿಸಿ ರಂಗಸಂವಾದ ನಡೆಸಿಕೊಡಲಿದ್ದಾರೆ.
ಈ ಸಾಪ್ತಾಹಿಕ ಕಾರ್ಯಕ್ರಮದಲ್ಲಿ ಪ್ರತಿದಿನ ಬೆಳಿಗ್ಗೆ 11.30ಕ್ಕೆ ಮತ್ತು ಮಧ್ಯಾಹ್ನ 3ಗಂಟೆಯಿಂದ ತೃತೀಯ ಲಿಂಗಿಗಳು ಮತ್ತು ಮಹಿಳೆಯರ ಏಕವ್ಯಕ್ತಿ ರಂಗಪ್ರದರ್ಶನಗಳು ನಡೆಯಲಿವೆ. ಎಪ್ರಿಲ್ 14ರಂದು ಬೆಳಿಗ್ಗೆ ಸಾವಿತ್ರಿ ಹೈಸ್ನಾಂ ಅಭಿನಯದ ಬಾಡಿ ಮೆಮೋರಿ ಎಂಬ ಮಣಿಪುರ ನಾಟಕ, ಮಧ್ಯಾಹ್ನ ವಿದ್ಯಾಹೆಗಡೆ ಅವರ ಗೂಡಿನೊಳಗೊಂದು ಹಕ್ಕಿ, ಎಪ್ರಿಲ್ 15ರಂದು ಬೆಳಿಗ್ಗೆ ಚೈತ್ರ ಕೆ. ಅವರ ಉರಿಯ ಉಯ್ಯಾಲೆ, ಮಧ್ಯಾಹ್ನ ರೂಮಿ ಹರೀಶ್ ಅವರ ಸಂಚಾರಿ, 16ರಂದು ಬೆಳಿಗ್ಗೆ ಪ್ರತಿಭಾ ಎಂ.ಎ. ಅವರ ಅಭಿನಯದ ಊರ್ಮಿಳೆ, ಮಧ್ಯಾಹ್ನ ಜ್ಯೋತಿ ಡೋಗ್ರಾ ಅಭಿನಯದ ನೋಟ್ಸ್ ಆನ್ ಚಾಯ್ ಎಂಬ ಆಂಗ್ಲ ನಾಟಕ, 17ರಂದು ಸುಪ್ರಿಯಾ ಎಸ್.ರಾವ್ ಅವರ ಅಭಿನಯದ ಮೈಥಿಲಿ, ಮಧ್ಯಾಹ್ನ ಶಶಿಕಲಾ ಮೈಸೂರು ಅಭಿನಯದ ಕಸ್ತೂರಬಾ, 18ರಂದು ಬೆಳಿಗ್ಗೆ ಮಂಜುಳಾ ಬಾದಾಮಿ ಅಭಿನಯದ ಸೀತಾಂತರಾಳ, ಮಧ್ಯಾಹ್ನ ಭಾಗೀರಥಿಬಾಯಿ ಕದಂ ಅವರ ಅಭಿನಯದ ಶಕುಂತಲೆಯೊಂದಿಗೆ ಒಂದು ಅಪರಾಹ್ನ, 19 ರಂದು ಬೆಳಿಗ್ಗೆ ಅಕ್ಷತಾ ಪಾಂಡವಪುರ ಅವರು ಅಭಿನಯಿಸಿರುವ ಒಬ್ಬಳು, ಮಧ್ಯಾಹ್ನ ಎ.ರೇವತಿ ಅಭಿನಯದ ಎನದು ಕೊರಲ್ ಎಂಬ ತಮಿಳು ರಂಗಪ್ರದರ್ಶನ ಮತ್ತು 20ರಂದು ಬೆಳಿಗ್ಗೆ ಸುಶೀಲಾ ಕೆಳಮನೆ ಅವರ ಅಭಿನಯದ ಸರಸ್ವತಿಬಾಯಿ ರಾಜವಾಡೆ ಮತ್ತು ಮಧ್ಯಾಹ್ನ ರಜನಿ ಗರುಡ ಅವರು ಅಭಿನಯಿಸಿರುವ ಮರುಭೂಮಿಯಲ್ಲೊಂದು ಮಿಂಚು ಎಂಬ ಏಕವ್ಯಕ್ತಿ ರಂಗಪ್ರದರ್ಶನಗಳು ನಡೆಯಲಿವೆ.
ಇದೇ ಅವಧಿಯಲ್ಲಿ ಪ್ರತಿದಿನ ಮಧ್ಯಾಹ್ನ ಎಳೆಯರಿಗಾಗಿ ಮಕ್ಕಳ ಸಿನಿಮೋತ್ಸವ ಹಾಗೂ ಚಿತ್ರಸಂವಾದ ನಡೆಯಲಿದೆ. ಎಪ್ರಿಲ್ 15ರಂದು ಚಿನ್ನಾರಿ ಮುತ್ತ ಚಿತ್ರ ಪ್ರದರ್ಶನ ಮತ್ತು ನವೀನ್ ಮಂಡಗದ್ದೆ ಅವರು ಸಮನ್ವಯಕಾರಗಾಗಿ ಆಗಮಿಸಿ ಸಂವಾದ ಕಾರ್ಯಕ್ರಮ ನಡೆಸಿಕೊಡುವರು. 16ರಂದು ದಿ ಫಾದರ್ ಚಿತ್ರಪ್ರದರ್ಶನ ಮತ್ತು ಅಕ್ಷತಾ ಹುಂಚದಕಟ್ಟೆ ಅವರೊಂದಿಗೆ ಸಂವಾದ, 17ರಂದು ಹ್ಯಾಚಿ ದ ಡಾಗ್ ಸ್ಟೋರಿ ಎಂಬ ಚಿತ್ರ ಪ್ರದರ್ಶನ ಮತ್ತು ಹೊನ್ನಾಳಿ ಚಂದ್ರಶೇಖರ್ ಅವರೊಂದಿಗೆ ಸಂವಾದ, 18ರಂದು ಓಕ್ಝಾ ಚಿತ್ರಪ್ರದರ್ಶನ, 19ರಂದು ಮಾಡರ್ನ್ ಟೈಮ್ಸ್ ಚಿತ್ರ ಪ್ರದರ್ಶನ ಮತ್ತು ಹೆಚ್.ಎಸ್.ನಾಗಭೂಷಣ ಅವರೊಂದಿಗೆ ಸಂವಾದ ಹಾಗೂ 20ರಂದು ಶ್ವಾಸ್ ಮರಾಠಿ ಚಿತ್ರಪ್ರದರ್ಶನ ಮತ್ತು ಸಹನಾ ಚೇತನ್ ಅವರೊಂದಿಗೆ ಚಿತ್ರ ಸಂವಾದ ಕಾರ್ಯಕ್ರಮಗಳು ನಡೆಯಲಿವೆ. ಈ ಸಂವಾದದಲ್ಲಿ ಎಳೆಯರು ಚಿತ್ರವನ್ನು ನೋಡುವ, ಓದುವ, ಅರ್ಥೈಸಿಕೊಳ್ಳುವ ಪರಿಯನ್ನು ಪರಿಚಯಿಸಲಾಗುವುದು ಎಂದವರು ತಿಳಿಸಿದ್ದಾರೆ.
ಈ ರಂಗೋತ್ಸವ ಕಾರ್ಯಕ್ರಮವನ್ನು ಎಪ್ರಿಲ್ 14ರಂದು ಸಂಜೆ 6 ಗಂಟೆಗೆ ಮಣಿಪುರದ ಖ್ಯಾತ ರಂಗಕರ್ಮಿ ಸಾವಿತ್ರಿ ಹೈಸ್ನಾಂ ಅವರು ಉದ್ಘಾಟಿಸುವರು. ಕವಿ ಮತ್ತು ಚಿಂತಕ ಸತ್ಯನಾರಾಯಣರಾವ್ ಅಣತಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು. ರಂಗ ಸಮಾಜದ ಸದಸ್ಯ ಮಲ್ಲಿಕಾರ್ಜುನ ಕಡಕೋಳ, ಗೋಪಾಲಕೃಷ್ಣ ನಾಯರಿ, ಎಲ್.ಕೃಷ್ಣಪ್ಪ, ಉಮಾರಾಣಿ ಬಾರಿಗಿಡದ ಹಾಗೂ ರಂಗಾಯಣದ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಅವರು ಉಪಸ್ಥಿತರಿರುವರು. ರಂಗಾಯಣ ಶಿವಮೊಗ್ಗ ಘಟಕದ ಅಧ್ಯಕ್ಷ ಡಾ.ಎಂ.ಗಣೇಶ್ ಅಧ್ಯಕ್ಷತೆ ವಹಿಸುವರು.
ಈ ಕಾರ್ಯಕ್ರಮದ ಸಮಾರೋಪ ಸಮಾರಂಭವು ಎಪ್ರಿಲ್ 20ರಮದು ಸಂಜೆ 6ಗಂಟೆಗೆ ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ನಡೆಯಲಿದೆ. ಸಾಗರದ ಖ್ಯಾತ ರಂಗಕರ್ಮಿ ಎಸ್.ಮಾಲತಿ ಅವರು ಈ ಸಮಾರಂಭದಲ್ಲಿ ಭಾಗವಹಿಸಿ ಸಮಾರೋಪ ಭಾಷಣ ಮಾಡುವರು. ತೀರ್ಥಹಳ್ಳಿಯ ರಂಗ ನಿರ್ದೇಶಕ ಮ್ಯಾಥ್ಯೂ ಸುರಾನೀ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು. ಮೈಸೂರು ರಂಗಸಮಾಜದ ಅಧ್ಯಕ್ಷ ಚಂದ್ರಕಾಂತ್, ಶ್ರೀಪಾದ ಭಟ್ ಅವರು ಉಪಸ್ಥಿತರಿರುವರು.







