ಎ. 18: ಹಸ್ತದ ಚಿಹ್ನೆ ರದ್ದತಿಗೆ ಕೋರಿದ ಅರ್ಜಿ ವಿಚಾರಣೆ

ಹೊಸದಿಲ್ಲಿ, ಎ. 12: ಕಾಂಗ್ರೆಸ್‌ನ ಹಸ್ತದ ಚಿಹ್ನೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ಬಿಜೆಪಿ ಸಲ್ಲಿಸಿದ ಮನವಿಯನ್ನು ಚುನಾವಣಾ ಆಯೋಗ ಸ್ವೀಕರಿಸಿದೆ ಹಾಗೂ ಇದರ ವಿಚಾರಣೆಯನ್ನು ಎಪ್ರಿಲ್ 18ರಂದು ನಡೆಸಲಿದೆ.
ಈ ವರ್ಷ ಜನವರಿಯಲ್ಲಿ ಆಯೋಗದ ಮುಂದೆ ಮನವಿ ಸಲ್ಲಿಸಲಾಗಿತ್ತು. ಹಸ್ತ ಮಾನವ ದೇಹದ ಒಂದು ಅಂಗ ಹಾಗೂ ಅದು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆ ಎಂದು ಮನವಿಯಲ್ಲಿ ಹೇಳಲಾಗಿದೆ. ಮನವಿಯನ್ನು ಎಪ್ರಿಲ್ 18ರಂದು ವಿಚಾರಣೆ ನಡೆಸಲು ಚುನಾವಣಾ ಆಯೋಗ ಒಪ್ಪಿಕೊಂಡಿದೆ. ಉಪ ಚುನಾವಣಾ ಆಯುಕ್ತ ಭೂಷಣ್ ಚಂದ್ರ ಕುಮಾರ್ ಮನವಿಯ ವಿಚಾರಣೆ ನಡೆಸಲಿದ್ದಾರೆ ಎಂದು ದೂರುದಾರ ಅಶ್ವಿನಿ ಉಪಾಧ್ಯಾಯ ತಿಳಿಸಿದ್ದಾರೆ.
ಚುನಾವಣಾ ಆಯೋಗ ಮಾದರಿ ನೀತಿ ಸಂಹಿತೆ ಜಾರಿಗೊಳಿಸಿದೆ. ಆದಾಗ್ಯೂ, ಭಾರತೀಯ ಕಾಂಗ್ರೆಸ್ ಪಕ್ಷದ ಚಿಹ್ನೆ ಕೈ. ಅದರ ಅಭ್ಯರ್ಥಿಗಳು, ಬೆಂಬಲಿಗರು ಹಾಗೂ ಏಜೆಂಟರು ಕೈ ಚಿಹ್ನೆ ಹೊಂದಿದ್ದಾರೆ. ಆದುದರಿಂದ ಅವರ ಚುನಾವಣಾ ಪ್ರಚಾರ ರದ್ದುಗೊಳಿಸಬೇಕು ಎಂದು ಅದು ಹೇಳಿದೆ. ಭಾರತೀಯ ಕಾಂಗ್ರೆಸ್ ಪಕ್ಷಕ್ಕೆ ನೀಡಲಾದ ಚುನಾವಣಾ ಚಿಹ್ನೆ ಕೈಯನ್ನು ರದ್ದುಗೊಳಿಸಬೇಕು. ಈ ಚಿಹ್ನೆಯನ್ನು ಮುಂದುವರಿಸಿದರೆ, ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಬಹುದು ಎಂದು ಅವರು ಹೇಳಿದ್ದಾರೆ. ಭಾರತೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು, ಬೆಂಬಲಿಗರು ಹಾಗೂ ಏಜೆಂಟರು ಮತಗಟ್ಟೆಯ ಒಳಗೆ ಕೂಡ ಚುನಾವಣಾ ಚಿಹ್ನೆಯಾದ ಹಸ್ತವನ್ನು ತೋರಿಸುವ ಮೂಲಕ ಮತ ಹಾಕಲು ಸೂಚಿಸುವ ಸಾಧ್ಯತೆ ಇದೆ ಎಂದು ಅಶ್ವಿನಿ ಉಪಾಧ್ಯಾಯ ದೂರಿನಲ್ಲಿ ಆರೋಪಿಸಿದ್ದಾರೆ.







