ಐಪಿಎಲ್: ಹೈದರಾಬಾದ್‌ಗೆ 1 ವಿಕೆಟ್ ಜಯ
ದೀಪಕ್ ಹೂಡಾ ಗೆಲುವಿನ ರೂವಾರಿ

ಹೈದರಾಬಾದ್, ಎ.12: ಆರಂಭಿಕ ಆಟಗಾರ ಶಿಖರ್ ಧವನ್ (45,28 ಎಸೆತ, 8 ಬೌಂಡರಿ) ಹಾಗೂ ದೀಪಕ್ ಹೂಡಾ(ಔಟಾಗದೆ 32)ಸಾಹಸದ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಐಪಿಎಲ್ ಪಂದ್ಯವನ್ನು 1 ವಿಕೆಟ್‌ನಿಂದ ರೋಚಕ ಜಯ ಸಾಧಿಸಿದೆ.
ಗುರುವಾರ ನಡೆದ ಐಪಿಎಲ್‌ನ 7ನೇ ಪಂದ್ಯದಲ್ಲಿ ಗೆಲ್ಲಲು 148 ರನ್ ಗುರಿ ಪಡೆದಿದ್ದ ಹೈದರಾಬಾದ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ ಗೆಲುವಿನ ರನ್ ದಾಖಲಿಸಿತು.
ಮುಂಬೈ ಪರ ಮಯಾಂಕ್ ಮರ್ಕಂಡೆ(4-23) ಹಾಗೂ ಮುಸ್ತಫಿಝುರ್ರಹ್ಮಾನ್(3-24) ಏಳು ವಿಕೆಟ್ ಉಡಾಯಿಸಿದರು. ಔಟಾಗದೆ 32 ರನ್(25 ಎಸೆತ, 1 ಬೌಂಡರಿ, 1 ಎಸೆತ) ಗಳಿಸಿದ ದೀಪಕ್ ಹೂಡಾ ಗೆಲುವಿನ ರೂವಾರಿಯಾದರು. ಹೈದರಾಬಾದ್‌ಗೆ ಕೊನೆಯ ಓವರ್‌ನಲ್ಲಿ ಗೆಲ್ಲಲು 11 ರನ್ ಅಗತ್ಯವಿತ್ತು. ಕೇವಲ ಒಂದು ವಿಕೆಟ್ ಕೈಯ್ಯಲ್ಲಿತ್ತು. ಆಗ ಸಿಕ್ಸರ್ ಸಿಡಿಸಿದ ಹೂಡಾ ಹೈದರಾಬಾದ್ ಗೆಲುವನ್ನು ಖಾತ್ರಿಪಡಿಸಿದರು. ಹೂಡಾಗೆ ಬಾಲಂಗೋಚಿ ಸ್ಟಾನ್‌ಲೇಕ್(2) ಉತ್ತಮ ಸಾಥ್ ನೀಡಿದರು.
ಇದಕ್ಕೆ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಹೈದರಾಬಾದ್ ತಂಡದ ಬೌಲರ್‌ಗಳ ಕರಾರುವಾಕ್ ದಾಳಿಗೆ ತತ್ತರಿಸಿ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 147 ರನ್ ಗಳಿಸಿತು.
ಮುಂಬೈಗೆ ನಾಯಕ ರೋಹಿತ್ ಶರ್ಮ(11) ಉತ್ತಮ ಆರಂಭ ನೀಡಲು ವಿಫಲರಾದರು. ಲೂವಿಸ್‌ರೊಂದಿಗೆ ಇನಿಂಗ್ಸ್ ಆರಂಭಿಸಿದ ರೋಹಿತ್ 2ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ಸ್ಟಾನಿಲೇಕ್ ಅವರು ರೋಹಿತ್‌ಗೆ ಪೆವಿಲಿಯನ್ ಹಾದಿ ತೋರಿಸಿದರು.
ಲೂವಿಸ್(29) ಹಾಗೂ ಇಶಾನ್ ಕಿಶನ್(9)2ನೇ ವಿಕೆಟ್‌ಗೆ 37 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಹಾರ್ದಿಕ್ ಪಾಂಡ್ಯ(15) ಹಾಗೂ ಕಿರೊನ್ ಪೊಲಾರ್ಡ್(28) 5ನೇ ವಿಕೆಟ್‌ಗೆ 38 ರನ್ ಜೊತೆಯಾಟ ನಡೆಸಿದರೂ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು. ಸೂರ್ಯಕುಮಾರ್ ಯಾದವ್ 28 ರನ್ ಗಳಿಸಿ ಔಟಾದರು.
ಹೈದರಾಬಾದ್ ಪರ ಸಂದೀಪ್ ಶರ್ಮ(2-25), ಸ್ಟ್ಯಾನಿಲೇಕ್(2-42) ಹಾಗೂ ಸಿದ್ದಾರ್ಥ್ ಕೌಲ್(2-29)ತಲಾ ಎರಡು ವಿಕೆಟ್ ಪಡೆದರು. ಶಾಕಿಬ್ ಅಲ್ ಹಸನ್ 34 ರನ್‌ಗೆ 1 ವಿಕೆಟ್ ಪಡೆದರು.







