ಶಿವಮೊಗ್ಗ: ಪ್ರತ್ಯೇಕ ರಸ್ತೆ ಅಪಘಾತ; ಮೂವರು ಯುವಕರು ಮೃತ್ಯು
ಶಿವಮೊಗ್ಗ, ಎ.13: ಜಿಲ್ಲೆಯ ಶಿವಮೊಗ್ಗ ಹಾಗೂ ತೀರ್ಥಹಳ್ಳಿ ತಾಲೂಕುಗಳಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣಗಳಲ್ಲಿ ಮೂವರು ಯುವಕರು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಶಿವಮೊಗ್ಗ ವರದಿ: ಟೈರ್ ಪಂಕ್ಚರ್ ಆಗಿ ರಸ್ತೆ ಮಧ್ಯೆ ನಿಂತಿದ್ದ ಲಾರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ಬೀರನಕೆರೆ ಗ್ರಾಮದಲ್ಲಿ ನಡೆದಿದೆ.
ಹುಣಸೋಡು ಗ್ರಾಮದ ನಿವಾಸಿ ಮನೋಜಕುಮಾರ್ (20) ಹಾಗೂ ಅವರ ಸಂಬಂಧಿ ಹರೀಶ್‍ನಾಯ್ಕ್ (22) ಮೃತಪಟ್ಟವರೆಂದು ಗುರುತಿಸಲಾಗಿದೆ. ಅಜಾಗರೂಕವಾಗಿ ರಸ್ತೆ ಮಧ್ಯದಲ್ಲಿ ಲಾರಿ ನಿಲ್ಲಿಸಿಕೊಂಡಿದ್ದ ಆರೋಪದ ಮೇರೆಗೆ ಚಾಲಕನ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತೀರ್ಥಹಳ್ಳಿ ವರದಿ: ವೇಗವಾಗಿ ಆಗಮಿಸಿದ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೋರ್ವ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ನಡೆದಿದೆ. ನವೀನ (22) ಮೃತಪಟ್ಟ ಬೈಕ್ ಸವಾರ ಎಂದು ಗುರುತಿಸಲಾಗಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಲಾರಿ ಚಾಲಕನ ವಿರುದ್ದ ಪ್ರಕರಣ ದಾಖಲಾಗಿದೆ.