ಮೂಳೆಗಳು ಕರಗುವ ಅಪರೂಪದ ಕಾಯಿಲೆಯ ಬಗ್ಗೆ ನೀವು ತಿಳಿದಿರಲೇಬೇಕಾದ ಮಾಹಿತಿಯಿಲ್ಲಿದೆ
ಮೂಳೆಗಳು ಕರಗುವ ಕಾಯಿಲೆ ಅಥವಾ ಫ್ಯಾಂಟಮ್ ಬೋನ್ ಡಿಸೀಸ್ ಶರೀರದಲ್ಲಿಯ ಅಸ್ಥಿಪಂಜರಕ್ಕೆ ಸಂಬಂಧಿಸಿದ ರೋಗವಾಗಿದೆ. ಮೂಳೆಯಲ್ಲಿನ ದುಗ್ಧರಸ ನಾಳಗಳು ಮತ್ತು ಅದರ ಸುತ್ತಲಿನ ಮೃದು ಅಂಗಾಂಶಗಳ ವಿನಾಶಕ ಅಥವಾ ಅನಿಯಂತ್ರಿತ ಹರಡುವಿಕೆಯು ಈ ಕಾಯಿಲೆಯ ವೈಶಿಷ್ಟವಾಗಿದೆ. ಇದು ಮೂಳೆಯ ಭಾಗಶಃ ಅಥವಾ ಸಂಪೂರ್ಣ ಮರುಹೀರುವಿಕೆಯೊಂದಿಗೆ ಸಮೀಪದ ಮೂಳೆಗಳಿಗೂ ಹರಡಬಹುದು. ಹೆಚ್ಚಾಗಿ ಈ ರೋಗವು ನಮ್ಮ ಶರೀರದ ಒಂದು ಮೂಳೆಗೆ ಸೀಮಿತವಾಗಿರುತ್ತದೆ, ಆದರೆ ಹೆಚ್ಚಿನ ಮೂಳೆಗಳಿಗೂ ತಗಲುವ ಸಾಧ್ಯತೆಗಳಿವೆ.
ಶರೀರದಲ್ಲಿನ ದುಗ್ಧರಸ ವ್ಯವಸ್ಥೆಯು ದುಗ್ಧನಾಳಗಳ ಜಾಲವಾಗಿದ್ದು, ಇವು ದುಗ್ಧರಸವನ್ನು ರಕ್ತಕ್ಕೆ ಸಾಗಿಸುತ್ತವೆ. ದುಗ್ಧರಸವು ಲಿಂಫೋಸೈಟ್ಗಳು, ಕೊಬ್ಬುಗಳು ಮತ್ತು ಪ್ರೋಟಿನ್ ಗಳನ್ನೊಳಗೊಂಡಿದೆ. ಅದು ಸೋಂಕುಗಳ ವಿರುದ್ಧ ಹೋರಾಡುವ ಕೆಲಸವನ್ನೂ ಮಾಡುತ್ತದೆ.
ದುಗ್ಧರಸ ವ್ಯವಸ್ಥೆಯು ಗುಲ್ಮವನ್ನೂ ಒಳಗೊಂಡಿದ್ದು, ಇದು ಅಸ್ಥಿಮಜ್ಜೆಯನ್ನು ಉತ್ಪತ್ತಿ ಮಾಡುತ್ತದೆ. ಅಸ್ಥಿಮಜ್ಜೆಯು ಮೂಳೆಯೊಳಗಿರುವ ಮೃದು ಅಂಗಾಂಶವಾಗಿದ್ದು, ರಕ್ತಕಣಗಳನ್ನು ಉತ್ಪಾದಿಸುತ್ತದೆ. ಗುಲ್ಮವು ಸವಕಳಿಯಾದ ಕೆಂಪು ರಕ್ತಕಣಗಳನ್ನು ಶರೀರದಿಂದ ಹೊರಹಾಕುವ ಕೆಲಸವನ್ನೂ ಮಾಡುತ್ತದೆ ಮತ್ತು ಅಸ್ಥಿಮಜ್ಜೆಯು ಅವುಗಳನ್ನು ಮರುಪೂರಣಗೊಳಿಸುತ್ತದೆ.
ಮೂಳೆ ಕರಗುವ ಕಾಯಿಲೆಯಲ್ಲಿ ದುಗ್ಧನಾಳಗಳನ್ನು ತಂತು ಸ್ವರೂಪದ ಜೋಡಕ ಅಂಗಾಂಶಗಳು ಅತಿಕ್ರಮಿಸುತ್ತವೆ ಮತ್ತು ಅವುಗಳ ಕಾರ್ಯನಿರ್ವಹಣೆಗೆ ಅಡ್ಡಿಯನ್ನುಂಟು ಮಾಡುತ್ತವೆ. ದುಗ್ಧರಸ ವ್ಯವಸ್ಥೆಗೆ ಉಂಟಾಗುವ ಈ ಹಾನಿಯು ಮಾರಣಾಂತಿಕವಾಗುತ್ತದೆ.
ವಾಸ್ತವದಲ್ಲಿ ಮೂಳೆ ಕರಗುವ ಕಾಯಿಲೆಗೆ ನಿಖರ ಕಾರಣಗಳು ತಿಳಿದಿಲ್ಲ. ಹಳೆಯ ಮೂಳೆಗಳು ಕರಗಿ ಅದರ ಸ್ಥಾನದಲ್ಲಿ ಹೊಸಮೂಳೆಗಳು ಸೃಷ್ಟಿಯಾಗುವ ಪ್ರಕ್ರಿಯೆಯು ಮೂಳೆ ದ್ರವ್ಯರಾಶಿಯನ್ನು ಕಾಯ್ದಕೊಳ್ಳುತ್ತದೆ. ಆಸ್ಟಿಯೊಕ್ಲಾಸ್ಟ್ ಎಂಬ ಕೋಶಗಳು ಹಳೆಯ ಮೂಳೆಗಳನ್ನು ಕರಗಿಸುವ ಕೆಲವು ಕಿಣ್ವಗಳನ್ನು ಸ್ರವಿಸುತ್ತವೆ ಮತ್ತು ಆಸ್ಟಿಯೊಬ್ಲಾಸ್ಟ್ ಕೋಶಗಳು ಹೊಸಮೂಳೆಯನ್ನು ಉತ್ಪತ್ತಿ ಮಾಡುತ್ತವೆ. ಮೂಳೆ ಕರಗುವ ಕಾಯಿಲೆಯುಳ್ಳ ವ್ಯಕ್ತಿಯಲ್ಲಿ ಈ ಪ್ರಕ್ರಿಯೆಗೆ ವ್ಯತ್ಯಯವಾಗಿರುತ್ತದೆ ಮತ್ತು ಅದು ಅಸ್ಥಿಮಜ್ಜೆಯಲ್ಲಿ ಅಸಮತೋಲನವನ್ನುಂಟು ಮಾಡುತ್ತದೆ. ಈ ಅಸಮತೋಲನವು ಶರೀರದಲ್ಲಿ ಕೆಲವು ರಾಸಾಯನಿಕ ಬದಲಾವಣೆಗಳನ್ನುಂಟು ಮಾಡುತ್ತದೆ ಮತ್ತು ಇದರಿಂದಾಗಿ ಆಸ್ಟಿಯೊಬ್ಲಾಸ್ಗಳ ಮೇಲೆ ವ್ಯತಿರಿಕ್ತ ಪರಿಣಾಮವುಂಟಾಗುತ್ತದೆ. ಹೀಗಾದಾಗ ಹೊಸದಾಗಿ ಸೃಷ್ಟಿಯಾಗುವ ಮೂಳೆಗಳಿಗಿಂತ ಕರಗುವ ಮೂಳೆಗಳ ಪ್ರಮಾಣ ಹೆಚ್ಚಾಗಿರುತ್ತದೆ. ಈ ಕಾಯಿಲೆಯನ್ನುಂಟು ಮಾಡುವ ರೋಗ ನಿರೋಧಕೀಯ, ವಂಶವಾಹಿ ಅಥವಾ ಪರಿಸರ ಕಾರಣಗಳು ಈವರೆಗೂ ತಿಳಿದುಬಂದಿಲ್ಲ.
ಈ ರೋಗವುಂಟಾಗ ಭುಜ, ಸೊಂಟ, ದವಡೆ, ಪಕ್ಕೆ, ಬೆನ್ನುಹುರಿ, ತಲೆಬುರುಡೆ ಮತ್ತು ಕುತ್ತಿಗೆಯ ಭಾಗದ ಮೂಳೆಗಳು ಸಾಮಾನ್ಯವಾಗಿ ಪೀಡಿತವಾಗಿರುತ್ತವೆ. ನೋವು ಮತ್ತು ಬಾವು ಕಾಣಿಸಿಕೊಳ್ಳುತ್ತದೆ ಮತ್ತು ಮೂಳೆಯ ಸುತ್ತಲಿನ ಭಾಗವು ಆಕಾರವನ್ನು ಕಳೆದುಕೊಳ್ಳುತ್ತದೆ. ಆದರೆ ಕೆಲವೊಮ್ಮೆ ಬಿದ್ದು ಮೂಳೆಗೆ ಪೆಟ್ಟಾಗುವುದೋ ಅಥವಾ ವಿಪರೀತ ವ್ಯಾಯಾಮದಂತಹ ಬಾಹ್ಯ ಚಟುವಟಿಕೆಗಳು ರೋಗಪೀಡಿತ ಮೂಳೆಯ ಮೇಲೆ ಒತ್ತಡ ಹೇರುವವರೆಗೂ ಯಾವುದೇ ಬಾಹ್ಯ ಲಕ್ಷಣಗಳು ಕಂಡುಬರುವುದಿಲ್ಲ.
ಈ ರೋಗಕ್ಕೆ ಗುರಿಯಾಗುವ ಮೂಳೆಗಳು ಕ್ರಮೇಣ ತಮ್ಮ ದ್ರವ್ಯರಾಶಿಯನ್ನು ಕಳೆದುಕೊಳ್ಳುತ್ತವೆ. ಇದರಿಂದಾಗಿ ಮೂಳೆಗಳು ದುರ್ಬಲಗೊಂಡು ತೀವ್ರ ಹಾನಿಗೆ ಸುಲಭಭೇದ್ಯವಾಗುತ್ತವೆ. ಬೆನ್ನುಹುರಿ ಅಥವಾ ತಲೆಬುರುಡೆಯ ಮೂಳೆಗಳಲ್ಲಿ ಈ ರೋಗವು ಕಾಣಿಸಿಕೊಂಡಾಗ ಕೆಲವು ನರಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಅದು ಪಾರ್ಶ್ವವಾಯುವಿಗೂ ಕಾರಣವಾಗಬಹುದು. ಮೆನಿಂಜೈಟಿಸ್ಗೆ ಗುರಿಯಾಗುವ ಸಾಧ್ಯತೆಯೂ ಇದೆ.
ಪಕ್ಕೆಲಬುಗಳು ಈ ರೋಗಕ್ಕೆ ಗುರಿಯಾದಾಗ ಶ್ವಾಸಕೋಶಗಳು ಮತ್ತು ಎದೆಗೂಡುಗಳಿಗೆ ಹೊಂದಿಕೊಂಡಿರುವ ವಪೆಗಳ ಮಧ್ಯೆ ದುಗ್ಧರಸ ಮತ್ತು ಕೊಬ್ಬಿನ ಮಿಶ್ರಣವಾಗಿರುವ ಚೈಲ್ ಎಂಬ ದಪ್ಪಸ್ರಾವವು ಸಂಗ್ರಹಗೊಳ್ಳುತ್ತದೆ. ಇದು ಉಸಿರಾಟದ ತೊಂದರೆ ಮತ್ತು ಎದೆನೋವಿಗೆ ಕಾರಣವಾಗುತ್ತದೆ. ಈ ಸ್ರಾವವು ಹೃದಯದಲ್ಲಿ ಸೋರಿಕೆಯಾದರೆ ಅದು ಗಂಭೀರ ಸ್ಥಿತಿಗೆ ಕಾರಣವಾಗುತ್ತದೆ. ಪ್ರಿಕಾರ್ಡಿಯಲ್ ಎಫ್ಯೂಸನ್ ಅಥವಾ ಹೃದಯದ ಸುತ್ತ, ವಿಶೇಷವಾಗಿ ಹೃದಯಾವರಣ ದಲ್ಲಿ ಚೈಲ್ ಸಂಗ್ರಹಗೊಳ್ಳುವುದು ಜೀವಕ್ಕೆ ಮಾರಕವಾಗಬಹುದು. ಈ ಕಾಯಿಲೆಯು ಕೆಲವರ್ಷಗಳ ಬಳಿಕ ಗುಣವಾಗುವ ಅವಕಾಶಗಳಿವೆ. ಆದರೆ ಬೆನ್ನುಹುರಿ, ತಲೆಬುರುಡೆ ಅಥವಾ ಎದೆಯ ಮೂಳೆಗಳಿಗೆ ಈ ರೋಗವು ತಗುಲಿದರೆ ಅದು ಮಾರಣಾಂತಿಕವಾಗಬಲ್ಲದು. ಯಾವ ಮೂಳೆಯು ರೋಗಕ್ಕೆ ಗುರಿಯಾಗಿದೆ ಮತ್ತು ಹಾನಿ ಎಷ್ಟಾಗಿದೆ ಎನ್ನುವುದನ್ನು ಅವಲಂಬಿಸಿ ರೋಗದ ಲಕ್ಷಣಗಳ ತೀವ್ರತೆಯು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಈ ರೋಗಕ್ಕೆ ನಿರ್ದಿಷ್ಟ ಕಾರಣ ಇನ್ನೂ ತಿಳಿದಿಲ್ಲವಾದ್ದರಿಂದ ನಿರ್ದಿಷ್ಟ ಚಿಕಿತ್ಸೆಯೂ ಇದಕ್ಕಿಲ್ಲ. ರೋಗಿಗಳಿಗೆ ವಿವಿಧ ಬಗೆಯ ಚಿಕಿತ್ಸೆಗಳನ್ನು ನೀಡಲಾಗುತ್ತಿದೆಯಾದರೂ ಎಲ್ಲರಲ್ಲಿಯೂ ಕೆಲಸ ಮಾಡಬಲ್ಲ ಒಂದೇ ವಿಧಾನವನ್ನು ರೂಪಿಸಲು ಸಾಧ್ಯವಾಗಿಲ್ಲ. ಪ್ರತಿ ವ್ಯಕ್ತಿಯಲ್ಲಿನ ಲಕ್ಷಣಗಳನ್ನು ಆಧರಿಸಿ ಆ ವ್ಯಕ್ತಿಗೇ ನಿರ್ದಿಷ್ಟವಾದ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ.
ಸದ್ಯ ವಿಕಿರಣ, ಶಸ್ತ್ರಚಿಕಿತ್ಸೆ ಮತು ಔಷಧಿ ಸೇವನೆ...ಹೀಗೆ ಮೂರು ಪ್ರಮುಖ ವಿಧಗಳನ್ನು ಈ ರೋಗದ ಚಿಕಿತ್ಸೆಯಲ್ಲಿ ಬಳಸಲಾಗುತ್ತಿದೆ.