ಮಡಿಕೇರಿ: 'ಚೆರಿಯಮನೆ ಕ್ರಿಕೆಟ್ ಕಪ್' ಗೌಡ ಕುಟುಂಬ ಕ್ರಿಕೆಟ್ ಹಬ್ಬಕ್ಕೆ ಚಾಲನೆ

ಮಡಿಕೇರಿ,ಎ.15: ಪ್ರತಿಯೊಂದು ಸಮಾಜ ಭಾಷೆಯ ಆಧಾರದಲ್ಲಿ ಬೇರೆ ಬೇರೆ ಎಂದು ಭಾವಿಸದೆ ನಾವೆಲ್ಲರೂ ಒಂದೇ ಎಂದು ಒಗ್ಗೂಡಿದರೆ ರಾಜಕೀಯ ಮತ್ತು ಸಂಘಟನಾತ್ಮಕ ಶಕ್ತಿ ವೃದ್ಧಿಸಲು ಸಾಧ್ಯವೆಂದು ಮೈಸೂರು ಹಾಗೂ ಕೊಡಗು ಕ್ಷೇತ್ರದ ಸಂಸದರಾದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟಿದ್ದಾರೆ.
ಕೊಡಗು ಗೌಡ ಯುವ ವೇದಿಕೆ ಆಶ್ರಯದಲ್ಲಿ ಗೌಡ ಕುಟುಂಬ ತಂಡಗಳ ನಡುವೆ ನಡೆಯುತ್ತಿರುವ 19ನೇ ವರ್ಷದ ಕ್ರಿಕೆಟ್ ಹಬ್ಬಕ್ಕೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು. ಕ್ರಿಕೆಟ್ ಪಂದ್ಯಾವಳಿಯ ಆತಿಥ್ಯವನ್ನು ಚೆರಿಯಮನೆ ಕುಟುಂಬ ವಹಿಸಿಕೊಂಡಿದ್ದು, ಕುಟುಂಬದ ಪಟ್ಟೆದಾರರಾದ ಚೆರಿಯಮನೆ ಕೆಂಚಪ್ಪ ಹಾಗೂ ಬೆಳ್ಯಪ್ಪ ದೀಪ ಬೆಳಗುವ ಮೂಲಕ ಕ್ರಿಕೆಟ್ ಹಬ್ಬವನ್ನು ಉದ್ಘಾಟಿಸಿದರು.
ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಭಾಷೆಗಳ ಗೋಡೆಯನ್ನು ಮೀರಿ ಸಮಾಜ ಮುಂದುವರೆಯಬೇಕು. ಭಾಷೆ ಆಧಾರದಲ್ಲಿ ಸಮಾಜದಲ್ಲಿ ಬಿರುಕು ಉಂಟಾಗಬಾರದು. ತುಳುನಾಡಿನಲ್ಲಿ ತುಳು ಭಾಷಿಕ ಗೌಡರು, ಕೊಡಗು ಹಾಗೂ ಸುಳ್ಯದಲ್ಲಿ ಅರೆಭಾಷಿಕ ಗೌಡರು ಮತ್ತು ರಾಜ್ಯದ ಇತರ ಭಾಗಗಳಲ್ಲಿ ಕನ್ನಡ ಮಾತನಾಡುವ ಗೌಡರಿದ್ದಾರೆ. ಇವರೆಲ್ಲರ ಒಗ್ಗಟ್ಟು ಸಮಾಜದ ಏಳಿಗೆಗೆ ಅಗತ್ಯವೆಂದು ಅಭಿಪ್ರಾಯಪಟ್ಟರು.
ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಕ್ರೀಡಾ ಪ್ರತಿಭೆಗಳನ್ನು ಕ್ರೀಡಾಕ್ಷೇತ್ರಕ್ಕೆ ಪರಿಚಯಿಸಲು ಈ ರೀತಿಯ ಕ್ರೀಡಾಕೂಟಗಳು ಹೆಚ್ಚು ಸಹಕಾರಿಯಾಗಿದೆ. ಮಾತ್ರವಲ್ಲ ದೂರದೂರುಗಳಲ್ಲಿರುವ ಸಮಾಜದ ಬಾಂಧವರು ಒಂದೆಡೆ ಸೇರಿ ಸಂಬಂಧ ವೃದ್ಧಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತವೆ ಎಂದರು. ಸಮಾಜವನ್ನು ಬೆಸೆಯುವ ಕ್ರೀಡಾಕೂಟಗಳು ಹೆಚ್ಚು ಹೆಚ್ಚು ನಡೆಯಬೇಕೆಂದರು.
ಆಶೀರ್ವಚನ ನೀಡಿದ ಕೊಡಗು-ಹಾಸನ ಜಿಲ್ಲೆಯ ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮಾಠಾಧಿಪತಿ ಶ್ರೀ ಶಂಭುನಾಥ ಮಹಾಸ್ವಾಮೀಜಿ ಅವರು, ಇಂದು ಅವಿಭಕ್ತ ಕುಟುಂಬದಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಕ್ರೀಡಾಕೂಟ ನಡೆಯುತ್ತಿರುವುದು ವಿಶೇಷ ಹಾಗೂ ಅರ್ಥಪೂರ್ಣ. ನಾವೆಲ್ಲ ಸನ್ಮಾರ್ಗದಲ್ಲಿ ನಡೆಯಲು ಹಿರಿಯರ ಆರ್ಶೀವಾದ ಅಗತ್ಯ. ಮನೆಯಲ್ಲಿಯೇ ನಮ್ಮ ತಂದೆ ತಾಯಿಯರಿಗೆ ದೊಡ್ಡ ಸ್ಥಾನ ನೀಡಬೇಕು. ಮನೆಗಳಿಗೆ ಗೋಡೆ ಇರಬೇಕೆ ಹೊರತು ಮನಸ್ಸುಗಳಿಗೆ ಗೋಡೆ ಕಟ್ಟಿಕೊಳ್ಳಬಾರದು ಎಂದು ಹೇಳಿದರು.
ಪ್ರತಿ ಮಕ್ಕಳು ಯಶಸ್ವಿಯಾಗಿ ಜೀವನ ರೂಪಿಸಿಕೊಳ್ಳಬೇಕು ಎಂದು ಪೋಷಕರು ಬಯಸುತ್ತಾರೆ. ಇದಕ್ಕೆ ಪೂರಕವಾಗಿ ಪ್ರತಿಯೊಬ್ಬರೂ ಜೀವನ ರೂಪಿಸಿಕೊಳ್ಳಬೇಕು. ಶರೀರ ಶಾಶ್ವತವಲ್ಲ, ನಮ್ಮ ಸಂಪಾದನೆಯೂ ಶಾಶ್ವತವಲ್ಲ, ಹಾಗೆಂದು ವಿನಾಕಾರಣ ಕಾಲ ಕಳೆಯುವುದು ಕೂಡ ಸೂಕ್ತವಲ್ಲ. ನಮ್ಮನ್ನು ನಾವು ಅರ್ಥೈಸಿಕೊಂಡು ಭಗವಂತ ರೂಪಿಸಿದ ಬದುಕನ್ನು ಸಾರ್ಥಕಪಡಿಸಿಕೊಳ್ಳೋಣ ಎಂದು ಸ್ವಾಮೀಜಿ ಕಿವಿ ಮಾತು ಹೇಳಿದರು.
ವಿಶ್ವ ಒಕ್ಕಲಿಗರ ಮಹಾ ವೇದಿಕೆ ಅಧ್ಯಕ್ಷ ವೈ.ಡಿ.ರವಿಶಂಕರ್ ಮಾತನಾಡಿ, ಈ ರೀತಿಯ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡುವ ಕ್ರೀಡಾಪಟುಗಳು ಐಪಿಎಲ್ ಸೇರಿದಂತೆ ರಾಜ್ಯ, ರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವಂತ್ತಾಗಬೇಕು ಎಂದರು. ಸಮುದಾಯದ ಸಾಧಕರನ್ನು ವಿಶ್ವ ಮಟ್ಟಕ್ಕೆ ಪರಿಚಯಿಸುವ ಕಾರ್ಯವಾಗಬೇಕಾಗಿದೆ. ಬೆಂಗಳೂರು ನಿರ್ಮಾತೃ ಕೆಂಪೇಗೌಡ ಅವರ ಸಾಧನೆಯನ್ನು ಗುರುತಿಸಿ ಇತ್ತೀಚೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ಉತ್ಸವವನ್ನು ಮಾಡಲಾಗಿದೆ. ಇದೇ ಪ್ರಕಾರವಾಗಿ ಕೊಡಗಿನ ಸ್ವಾತಂತ್ರ್ಯ ಯೋಧ ಗುಡ್ಡೆಮನೆ ಅಪ್ಪಯ್ಯಗೌಡರ ಉತ್ಸವನ್ನು ದೆಹಲಿಯಲ್ಲಿ ನಡೆಸುವ ಮೂಲಕ ವೀರ ಸಾಧನೆಯನ್ನು ವಿಶ್ವಕ್ಕೆ ಪರಿಚಯಿಸುವಂತ್ತಾಗಬೇಕು ಎಂದರು.
ವಿರಾಜಪೇಟೆ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಮಾತನಾಡಿ ಕ್ರೀಡಾಕೂಟಕ್ಕೆ ಶುಭಕೋರಿದರು.
ಬೆಟ್ಟತ್ತೂರಿನ ಚೆರಿಯಮನೆ ಐನ್‍ಮನೆಯಿಂದ ಕ್ರೀಡಾ ಜ್ಯೋತಿ ತಂದ ಕ್ರೀಡಾಪಟುಗಳು ಸುದರ್ಶನ ವೃತ್ತದಲ್ಲಿರುವ ಗುಡ್ಡೆಮನೆ ಅಪ್ಪಯ್ಯಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಕ್ರೀಡಾಜ್ಯೋತಿಯನ್ನು ರಾಷ್ಟ್ರೀಯ ಹಾಕಿಪಟು ಚೆರಿಯಮನೆ ಕುಮುದಾ ಜಿಲ್ಲಾ ಕ್ರೀಡಾಂಗಣಕ್ಕೆ ತಂದರು.
ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಗೌಡ ಸಮುದಾಯ ಬಾಂಧವರು ಮೆರವಣಿಗೆ ಮೂಲಕ, ಸಾಂಪ್ರದಾಯಿಕ ಉಡುಗೆ ತೊಟ್ಟು ವೇದಿಕೆಗೆ ಬರಮಾಡಿಕೊಂಡರು.
ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಕೊಡಗು ಗೌಡ ಸಮಾಜ ಒಕ್ಕೂಟಗಳ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯ್ಯಪ್ಪ, ಕೊಡಗು ಗೌಡ ಯುವ ವೇದಿಕೆಯ ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್ ಉಪಸ್ಥಿತರಿದ್ದರು.
ಚೆರಿಯಮನೆ ಕುಟುಂಬಸ್ಥರು ಪ್ರಾರ್ಥಿಸಿದರೆ, ಚೆರಿಯಮನೆ ಪೆಮ್ಮಯ್ಯ ಸ್ವಾಗತಿಸಿದರು. ಚೆರಿಯಮನೆ ಕ್ರೀಡಾ ಸಮಿತಿ ಅಧ್ಯಕ್ಷ ಡಾ. ರಾಮಚಂದ್ರ ಆಶಯ ನುಡಿಯಾಡಿದರು. ಕಟ್ಟೆಮನೆ ಸೋನಾಜಿತ್ ವಂದಿಸಿದರು.
ಕ್ರೀಡಾಕೂಟದ ಮೊದಲ ಪಂದ್ಯಾಟಕ್ಕೆ ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮಠಾಧಿಪತಿ ಶ್ರೀ ಶಂಭುನಾಥ ಮಹಾಸ್ವಾಮೀಜಿ ಚಾಲನೆ ನೀಡಿದರು. ಚೆರಿಯಮನೆ ಸಿ ಹಾಗೂ ಉಡುದೋಳಿ ತಂಡದ ನಡುವೆ ಮೊದಲ ಪಂದ್ಯಾಟ ನಡೆಯಿತು.
ಕೊಡಗು ಗೌಡ ಯುವ ವೇದಿಕೆಯ ಪುಟಾಣಿಗಳು ‘ಕಾವೇರಿ ಮಾತೆಗೆ ಜೈ’ ಹಾಡಿಗೆ ನೃತ್ಯ ಮಾಡಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಈ ಬಾರಿ ದಾಖಲೆಯ 224 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದ್ದು, ಮೇ 5 ರಂದು ಸಮಾರೋಪ ಸಮಾರಂಭ ನಡೆಯಲಿದೆ.







