ಭಟ್ಕಳ :ಬೂತ್ ಮಟ್ಟದಲ್ಲಿ ಪ್ರಚಾರ ಕೈಗೊಂಡ ಭಟ್ಕಳ ಶಾಸಕ

ಭಟ್ಕಳ,ಎ.16: ನಗರ ಪ್ರದೇಶದ ಬೂತ್ ಮಟ್ಟದಲ್ಲಿ ಮನೆ ಮನೆ ಪ್ರಚಾರ ಕೈಗೊಂಡ ಭಟ್ಕಳ ಶಾಸಕ ಮಂಕಾಳ ಎಸ್. ವೈದ್ಯರು ಆಸರಕೇರಿ, ಮಣ್ಕುಳಿ, ವಿ.ವಿ. ರೋಡ್ ಸೇರಿದಂತೆ ವಿವಿಧ ವಾರ್ಡಗಳ ಕಾರ್ಯಕರ್ತರ ಮನೆಭೇಟಿ ಈ ಬಾರಿ ತಮಗೇ ಮತ ಚಲಾಯಿಸುವಂತೆ ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಹಿಂದಿನ ಬಾರಿ ಪಕ್ಷೇತರ ಶಾಸಕನಾಗಿ ಆಯ್ಕೆಯಾದ ನಂತರ ಕ್ಷೇತ್ರದ ಅಭಿವೃದ್ದಿಗಾಗಿ ಹಗಲಿರುಳು ಶ್ರಮೀಸಿದ್ದೇನೆ. ನನ್ನ ಅವಧಿಯಲ್ಲಿ ಪಕ್ಷಬೇದ ಮರೆತು ಎಲ್ಲಾ ಪಕ್ಷದ ಕಾರ್ಯಕರ್ತರ ಕೆಲಸವನ್ನು ಮಡಿಕೊಟ್ಟಿದ್ದೇನೆ. ಅಭಿವೃದ್ಧಿಯಲ್ಲಿಯೂ ಕೂಡಾ ಯಾವುದೇ ತಾರತಮ್ಯ ಮಾಡದೇ ಎಲ್ಲಾ ಕ್ಷೇತ್ರದ ಅಭಿವೃದ್ಧಿಗೆ ಲಕ್ಷಾಂತರ ರೂಪಾಯಿ ಅನುದಾನ ತಂದಿದ್ದೇನೆ ಎಂದ ಅವರು ಈ ಬಾರಿ ಜನತೆಗೆ ಅಭಿವೃದ್ಧಿಯ ಕುರಿತು ಅರ್ಥವಾಗಿದೆ. ಎಲ್ಲಾ ಕಡೆಯಲ್ಲಿಯೂ ಅಭಿವೃದ್ಧಿ ಮಾಡಿದ ನನಗೆ ಈ ಬಾರಿ ಜನತೆ ಹೆಚ್ಚಿನ ಮತಗಳನ್ನು ನೀಡಿ ಆರಿಸುತ್ತಾರೆನ್ನುವ ವಿಶ್ವಾಸವಿದೆ. ಮುಂದಿನ ಬಾರಿ ನನ್ನ ಅಭಿವೃದ್ಧಿ ಕಾರ್ಯವನ್ನು ನನಗೆ ಅತೀ ಹೆಚ್ಚು ಮತಗಳನ್ನು ನೀಡಿದ ಭಾಗದಿಂದ ಆರಂಭಿಸುತ್ತೇನೆ ಎಂದ ಅವರು ಜನ ಅಭಿವೃದ್ಧಿಯ ಪರವಾಗಿದ್ದಾರೆನ್ನುವುದು ನನಗೆ ಅರಿವಿದೆ ಎಂದರು.
ಕ್ಷೇತದ ಅಭಿವೃದ್ದಿಯೇ ನನ್ನ ಪ್ರಥಮ ಗುರಿಯಾಗಿದ್ದು, ಕಳೆದ ಐದು ವರ್ಷದ ಅವಧಿಯಲ್ಲಿ ಎರಡೂವರೆ ವರ್ಷಗಳ ಕಾಲ ನನಗೆ ಅಭಿವೃದ್ಧಿಯ ಕುರಿತು ತಿಳಿದುಕೊಳ್ಳಲಿಕ್ಕೇ ಬೇಕಾಗಿತ್ತು. ಉಳಿದ ಎರಡೂವರೆ ವರ್ಷದಲ್ಲಿ ಕೊಟ್ಯಾಂತರ ರೂಪಾಯಿ ತಂದು ಅಭಿವೃದ್ಧಿ ಮಾಡಿದ್ದೇನೆ. ಇನ್ನೊಮ್ಮೆ ನೀವೆಲ್ಲರೂ ನನ್ನ ಅಭಿವೃದ್ದಿ ಕಾರ್ಯ ಮೆಚ್ಚಿ ಪ್ರತಿ ಬೂತ್ ಮಟ್ಟದಲ್ಲಿ ಅತೀ ಹೆಚ್ಚು ಮತ ನನ್ನ ಪರವಾಗಿ ಬೀಳುವಂತೆ ನೋಡಿಕೊಂಡು ಕ್ಷೇತ್ರದ ಅಭಿವೃದ್ದಿಗೆ ಸಹಕಾರ ನೀಡಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠಲ್ ನಾಯ್ಕ ಮಾತನಾಡಿ, ಹಾಲಿ ಶಾಸಕ ಮಂಕಾಳ ವೈದ್ಯರು ಜನಪರ ನಾಯಕರಾಗಿದ್ದು ಭಟ್ಕಳ ಇತಿಹಾಸದಲ್ಲಿ ಸಾವಿರಾರು ಕೋಟಿ ಅನುದಾನದ ಕಾಮಗಾರಿಯನ್ನು ಮಂಜೂರು ಮಾಡಿಸಿ ಜನಪರ ಕೆಲಸಗಳನ್ನು ಮಾಡಿದ್ದಾರೆ. ಒಟ್ಟಾರೆ ಭಟ್ಕಳದ ಸರ್ವತೋಮುಖ ಅಭಿವೃದ್ದಿಗೆ ಶ್ರಮಪಟ್ಟು ಅಭಿವೃದ್ಧಿ ಹರಿಕಾರ ಎಂದು ಪ್ರತಿಯೋರ್ವರೂ ಹೇಳುವಂತಹ ಕೆಲಸ ಮಾಡಿದ್ದಾರೆ. ಇಂತಹ ಜನಪ್ರತಿನಿದಿಯನ್ನು ನಾವು ಮುಂದಿನ ಚುನಾವಣೆಯಲ್ಲಿ ಪ್ರಚಂಡ ಬಹುಮತಗಳಿಂದ ಚುನಾಯಿಸಬೇಕಾದದ್ದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.
ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೋಗೆರ್, ಜಿಲ್ಲಾ ಪಂಚಾಯತ್ ಸದಸ್ಯರಾದ ಸಿಂದು ಭಾಸ್ಕರ್ ನಾಯ್ಕ, ತಾಲೂಕ ಪಂಚಾಯತ್ ಅಧ್ಯಕ್ಷ ಈಶ್ವರ ಬೀಳಿಯಾ ನಾಯ್ಕ, ಉಪಾಧ್ಯಕ್ಷೆ ರಾಧಾ ವೈದ್ಯ, ಸದಸ್ಯೆ ಜಯಲಕ್ಷ್ಮೀ ಗೊಂಡ, ಶಿರಾಲಿ ಗ್ರಾ. ಪಂ.ಅಧ್ಯಕ್ಷ ವೆಂಕಟೇಶ ನಾಯ್ಕ, ಪ್ರಮುಖರಾದ ವೆಂಕಟೇಶ ನಾಯ್ಕ ಆಸರಕೇರಿ, ಸುಧಾಕರ ನಾಯ್ಕ ಮಣ್ಕುಳಿ ಮುಂತಾದವರು ಉಪಸ್ಥಿತರಿದ್ದರು







