ರಹಸ್ಯ ಮಾಹಿತಿ ವಿನಿಮಯ ಒಪ್ಪಂದಕ್ಕೆ ಭಾರತ, ಸ್ವೀಡನ್ ಮುಂದು

ಸ್ಟಾಕ್‌ಹೋಮ್ (ಸ್ವೀಡನ್), ಎ. 17: ರಹಸ್ಯ ಮಾಹಿತಿಗಳ ಹೆಚ್ಚಿನ ವಿನಿಮಯಕ್ಕೆ ಅವಕಾಶ ನೀಡುವ ಒಪ್ಪಂದವೊಂದನ್ನು ಏರ್ಪಡಿಸುವ ಬಗ್ಗೆ ಪರಿಶೀಲಿಸಲು ಭಾರತ ಮತ್ತು ಸ್ವೀಡನ್ ಒಪ್ಪಿಕೊಂಡಿವೆ.
ಈ ಒಪ್ಪಂದವು ಅಂತಿಮವಾಗಿ ತನ್ನ ಯುದ್ಧ ವಿಮಾನಗಳನ್ನು ಭಾರತಕ್ಕೆ ಮಾರಾಟ ಮಾಡಲು ಸ್ವೀಡನ್‌ನ ‘ಸಾಬ್ ಎಬಿ’ ಕಂಪೆನಿಗೆ ಅನುವು ಮಾಡಿಕೊಡಬಹುದು ಎನ್ನಲಾಗಿದೆ.
ರಕ್ಷಣಾ ಸಾಮಗ್ರಿಗಳ ವಿಷಯದಲ್ಲಿ ಜೊತೆಯಾಗಿ ಕೆಲಸ ಮಾಡಲು ಈ ಒಪ್ಪಂದದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಜೊತೆ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವೀಡನ್ ಪ್ರಧಾನಿ ಸ್ಟೀಫನ್ ಲೋಫ್‌ವನ್ ಹೇಳಿದರು.
‘‘ರಕ್ಷಣಾ ಕ್ಷೇತ್ರದಲ್ಲಿನ ನಮ್ಮ ದ್ವಿಪಕ್ಷೀಯ ಸಹಕಾರವನ್ನು ನಾವು ವಿಸ್ತರಿಸುತ್ತಿದ್ದು, ಈ ಒಪ್ಪಂದವು ಮಹತ್ವದ ಮುಮ್ಮುಖ ಹೆಜ್ಜೆಯಾಗಿರುತ್ತದೆ’’ ಎಂದರು.
ಸೈಬರ್ ಭದ್ರತೆ ಕುರಿತಂತೆ ಜಂಟಿ ಕಾರ್ಯಪಡೆಯನ್ನು ಸ್ಥಾಪಿಸಲು ಹಾಗೂ ಸಂಶೋಧನೆಯಲ್ಲಿ ಭಾಗೀದಾರಿಕೆಯನ್ನು ಹುಟ್ಟುಹಾಕಲು ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ಸ್ವೀಡನ್ ಪ್ರಧಾನಿ ತಿಳಿಸಿದರು.
ಮೋದಿ ಸ್ವೀಡನ್ ಪ್ರವಾಸದಲ್ಲಿದ್ದಾರೆ.





