ತುಮಕೂರು: ಮನೆ ಮೇಲೆ ದಾಳಿ; 65 ಕೆ.ಜಿ. ಗಾಂಜಾ ವಶ

ತುಮಕೂರು,ಎ.17: ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಅಪರಾಧ ಪತ್ತೆದಳ ಪೊಲೀಸರು ಸಿಪಿಐ ರಾಘವೇಂದ್ರ ಅವರ ನೇತೃತ್ವದಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಪಟ್ಟಣದ ಮನೆಯೊಂದರ ಮೇಲೆ ದಾಳಿ ನಡೆಸಿ ಸುಮಾರು 65 ಕೆ.ಜಿ.ಗೂ ಹೆಚ್ಚಿನ ಗಾಂಜಾವನ್ನು ವಶಪಡಿಸಿಕೊಂಡರಿವ ಘಟನೆ ನಡೆದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ಮತ್ತು ಎ.ಎಸ್.ಪಿ ಡಾ.ಶೋಭಾರಾಣಿ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾದ ವಿಭಾಗದ ಪೊಲೀಸರ ತಂಡ, ತಿಪಟೂರು ಡಿವೈಎಸ್‍ಪಿ ಮಹದೇವ್ ಅವರುಗಳು ಹುಳಿಯಾರು ಪಟ್ಟಣದ ಕಮಲಮ್ಮ ಎಂಬುವವರ ಮನೆಯ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ ಮೊದಲಿಗೆ 5-6 ಕೆ.ಜಿ.ಯಷ್ಟು ಗಾಜಾ ಸಿಕ್ಕಿದ್ದು, ಮತ್ತಷ್ಟು ಅನುಮಾನಗೊಂಡು ಇಡೀ ಮನೆಯ ಇಂಚಿಂಚು ಪರಿಶೀಲನೆಗೆ ಒಳಪಡಿಸಿದಾಗ ನೀರಿನ ತೊಟ್ಟಿಯೊಳಗೆ, ಮತ್ತು ಪ್ಲಾಸ್ಟಿಕ್ ಡ್ರಮ್ ಇರಿಸಿ ಅದರಲ್ಲಿ ಪ್ಲಾಸ್ಟಿಕ್ ಕೈಚೀಲದಲ್ಲಿ ತುಂಬಿರಿಸಲಾಗಿದ್ದ ಸುಮಾರು 65 ಕೆ.ಜಿ. ಗಾಂಜಾ ಸೊಪ್ಪು ಪತ್ತೆಯಾಗಿದೆ.
ಹುಳಿಯಾರು ಪಟ್ಟಣದ ಈ ಮನೆಗೆ ರಾಜ್ಯದ ಹೊರಗಿನ ಕೇರಳ, ತಮಿಳುನಾಡು ಬೇರೆ ಬೇರೆ ಕಡೆಯ ವ್ಯಕ್ತಿಗಳು ಬರುತ್ತಾರೆ. ಮನೆಯಲ್ಲಿ ಏನೋ ಅಕ್ರಮ ನಡೆಯುತ್ತಿದೆ ಎಂಬ ಗುಮಾನಿ ಸಾರ್ವಜನಿಕರಲ್ಲಿ ವ್ಯಕ್ತವಾಗಿ, ಪೊಲೀಸರ ಕಿವಿಗೆ ಬಿದ್ದಿತ್ತು. ಇದರ ಜಾಡು ಹಿಡಿದು ತನಿಖೆ ಆರಂಭಿಸಿದ ಪೊಲೀಸರಿಗೆ ಯಾವುದೋ ಅಕ್ರಮ ದಂಧೆ ನಡೆಯುತ್ತಿರುವ ಅನುಮಾನ ಬಲಗೊಂಡ ಹಿನ್ನೆಲೆಯಲ್ಲಿ ದಾಳಿ ನಡೆಸಿ ಸುಮಾರು 13 ಲಕ್ಷ ರೂ ಬೆಲೆ ಬಾಳುವ ಗಾಂಜಾ ಸೊಪ್ಪು ವಶಪಡಿಸಿಕೊಂಡಿದ್ದಾರೆ.
ಸದರಿ ಪ್ರಕರಣವನ್ನು ಪತ್ತೆ ಹೆಚ್ಚಿದ ಸಿಸಿಬಿ ಪೊಲೀಸರು ಹಾಗೂ ತಿಪಟೂರು ಉಪವಿಭಾಗ ಪೊಲೀಸರಿಗೆ ನಗದು ಬಹುಮಾನ ಘೋಷಿಸಿದ್ದಾರೆ.







