ಮೊಟ್ಟೆಯೊಳಗೆ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾಗಳು ಪ್ರವೇಶಿಸುವುದು ಹೇಗೆ ಗೊತ್ತಾ....?
ಸ್ವಚ್ಛ,ಯಾವುದೇ ಬಿರುಕಿಲ್ಲದ ಕವಚಗಳನ್ನು ಹೊಂದಿರುವ ತಾಜಾ ಮೊಟ್ಟೆಗಳೂ ಕಾಯಿಲೆಗಳನ್ನು ತರಬಹುದು ಎನ್ನುವುದನ್ನು ಇತ್ತೀಚಿನ ಅಧ್ಯಯನವೊಂದು ಬೆಳಕಿಗೆ ತಂದಿದೆ.
ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾದಿಂದ ಕಲುಷಿತ ಮೊಟ್ಟೆಗಳ ಸೇವನೆಯಿಂದ ಅನಾರೋಗ್ಯವುಂಟಾದ 79,000 ಪ್ರಕರಣಗಳು ಮತ್ತು 30 ಸಾವುಗಳು ವರದಿಯಾಗಿವೆ ಎಂದು ಅಮೆರಿಕದ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಹೇಳಿಕೆಯಲ್ಲಿ ತಿಳಿಸಿದೆ. ಇದು ನಿಜಕ್ಕೂ ಆಘಾತಕಾರಿ ಸುದ್ದಿಯಾಗಿದೆ.
ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಎಂದರೇನು?
ಸಾಲ್ಮೊನೆಲ್ಲಾ ಫುಡ್ ಪಾಯಿಸನಿಂಗ್ ಅನ್ನು ಉಂಟು ಮಾಡುವ ಬ್ಯಾಕ್ಟೀರಿಯಾಗಳ ಗುಂಪಿನ ಹೆಸರಾಗಿದೆ. ಸಾಲ್ಮೊನೆಲ್ಲಾ ಸೋಂಕಿಗೆ ಗುರಿಯಾಗಿರುವವರಲ್ಲಿ 12ರಿಂದ 72 ಗಂಟೆಗಳಲ್ಲಿ ಭೇದಿ,ಹೊಟ್ಟೆ ಕಿವಿಚುವಿಕೆ,ಜ್ವರ ಮತ್ತು ವಾಂತಿ ಕಾಣಿಸಿಕೊಳ್ಳುತ್ತವೆ.
ಸೋಂಕಿನ ಲಕ್ಷಣಗಳು ಸಾಮಾನ್ಯವಾಗಿ 4ರಿಂದ 7 ದಿನಗಳವರೆಗೆ ಇರುತ್ತವೆ ಮತ್ತು ಸೋಂಕುಪೀಡಿತರು ಯಾವುದೇ ಚಿಕಿತ್ಸೆಯಿಲ್ಲದೆ ಗುಣ ಹೊಂದುತ್ತಾರೆ. ಆದರೆ ಕೆಲವೊಮ್ಮೆ ಸೋಂಕು ಎಷ್ಟು ತೀವ್ರವಾಗಿರುತ್ತದೆ ಎಂದರೆ ರೋಗಿಯನ್ನು ಆಸ್ಪತ್ರೆಗೆ ದಾಖಲಿಸುವುದು ಅಗತ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ಸಾಲ್ಮೊನೆಲ್ಲಾ ಸೋಂಕು ತೀವ್ರವಾಗಿದ್ದರೆ ಅದು ಕರುಳಿನಿಂದ ರಕ್ತಪ್ರವಾಹಕ್ಕೆ ಮತ್ತು ಶರೀರದ ಇತರ ಅಂಗಾಂಗಗಳಿಗೆ ಹರಡಬಹುದು ಮತ್ತು ಸಾವಿಗೂ ಕಾರಣವಾಗಬಹುದು. ಮಕ್ಕಳು, ಗರ್ಭಿಣಿಯರು, ವಯಸ್ಸಾದವರು ಮತ್ತು ದುರ್ಬಲ ರೋಗ ನಿರೋಧಕ ಶಕ್ತಿಯುಳ್ಳವರು ಸಾಲ್ಮೊನೆಲ್ಲಾದಿಂದ ತೀವ್ರ ಅನಾರೊಗ್ಯಕ್ಕೆ ಗುರಿಯಾಗುವ ಅಪಾಯವಿರುವ ವರ್ಗಕ್ಕೆ ಸೇರಿದ್ದಾರೆ.
ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾಗಳು ಮೊಟ್ಟೆಯೊಳಗೆ ಹೇಗೆ ಪ್ರವೇಶಿಸುತ್ತವೆ?
ಯಾವುದೇ ಬಿರುಕಿಲ್ಲದ ಇಡೀ ಮೊಟ್ಟೆಯೊಳಗೂ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾಗಳು ಇರುವ ಸಾಧ್ಯತೆಗಳಿವೆ. ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಗಳು ಕೋಳಿಯ ಅಂಡಾಣುವಿನಲ್ಲಿ ಆಶ್ರಯ ಪಡೆದುಕೊಂಡ ಸಂದರ್ಭದಲ್ಲಿ ಮೊಟ್ಟೆಯು ರೂಪುಗೊಳ್ಳುವಾಗ ಅದರಲ್ಲಿ ಸೇರಿಕೊಳ್ಳು ತ್ತವೆ. ಹೀಗಾಗಿ ಕೋಳಿಯು ಮೊಟ್ಟೆಯನ್ನಿಡುವ ಮೊದಲೇ ಅದು ಈ ಬ್ಯಾಕ್ಟೀರಿಯಾದಿಂದ ಕಲುಷಿತಗೊಂಡಿರುತ್ತದೆ. ಹೊರನೋಟಕ್ಕೆ ಸಾಮಾನ್ಯವಾಗಿ ಕಾಣಿಸುವ ಮೊಟ್ಟೆಯೊಳಗೆ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ತುಂಬಿರಬಹುದು.
ಕೋಳಿಯು ಮೊಟ್ಟೆಯಿಟ್ಟ ನಂತರವೂ ಅದು ಈ ಬ್ಯಾಕ್ಟೀರಿಯಾಗಳಿಂದ ಕಲುಷಿತಗೊಳ್ಳಬಹುದು. ಕೋಳಿಗಳ ಕರುಳಿನಲ್ಲಿ ಈ ಬ್ಯಾಕ್ಟೀರಿಯಾಗಳು ಇರಬಹುದು ಮತ್ತು ಅವು ಮಲದಲ್ಲಿ ಈ ಬ್ಯಾಕ್ಟೀರಿಯಾಗಳನ್ನು ಹೊರಹಾಕುತ್ತವೆ. ಕೋಳಿಯು ಮೊಟ್ಟೆಗೆ ಕಾವು ಕೊಡುವಾಗ ಈ ಬ್ಯಾಕ್ಟೀರಿಯಾಗಳು ಅದರ ಕವಚಕ್ಕೆ ಹರಡಿಕೊಳ್ಳುತ್ತವೆ. 10,000ದಿಂದ 20,000 ಮೊಟ್ಟೆಗಳಲ್ಲಿ ಒಂದು ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾಗಳಿಂದ ಕಲುಷಿತಗೊಂಡಿರುತ್ತದೆ ಎಂದು ಅಂದಾಜಿಸಲಾಗಿದೆ.
ಬೇಯಿಸದ ಮೊಟ್ಟೆಯನ್ನು ಸೇರಿಸಿರುವ ಪ್ರೋಟಿನ್ ಮಿಲ್ಕ್,ಸೀಸರ್ ಸಲಾಡ್ ಇತ್ಯಾದಿ ಆಹಾರಗಳನ್ನು ಸೇವಿಸುವುದರಿಂದ ದೂರವಿರಬೇಕು. ಮಕ್ಕಳು,ವಯಸ್ಸಾದವರು ಮತ್ತು ಗರ್ಭಿಣಿಯರು ಅನಾರೋಗ್ಯಕ್ಕೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.
ಮೊಟ್ಟೆಗಳನ್ನು ಫ್ರಿಜ್ನಲ್ಲಿ ದಾಸ್ತಾನಿಡುವಾಗ ಅದರ ಉಷ್ಣತೆ 40 ಡಿಗ್ರಿ ಫ್ಯಾರೆನ್ಹೀಟ್ ಅಥವಾ ಕಡಿಮೆ ಇರಬೇಕು. ಮೊಟ್ಟೆಗಳನ್ನು ಕಾರ್ಟನ್ ನೊಳಗೂ ಹಾಕಿ ಫ್ರಿಝ್ನಲ್ಲಿರಿಸಬಹುದು. ಹೀಗೆ ಇಡುವಾಗ ಮೊಟ್ಟೆಗಳನ್ನು ತೊಳೆಯಬೇಡಿ,ಏಕೆಂದರೆ ಹಾಗೆ ಮಾಡುವುದರಿಂದ ಅವುಗಳ ಮೇಲಿರುವ ರಕ್ಷಣಾತ್ಮಕ ಖನಿಜ ತೈಲವೂ ತೊಳೆದು ಹೋಗುತ್ತದೆ ಮತ್ತು ಇದರಿಂದ ಬ್ಯಾಕ್ಟೀರಿಯಾಗಳು ಮೊಟ್ಟೆಯೊಳಗೆ ಪ್ರವೇಶಿಸಲು ಸಾಧ್ಯವಾಗುತ್ತದೆ. ಮೊಟ್ಟೆಗಳನ್ನು ಫ್ರಿಝ್ನಲ್ಲಿ 10-15 ದಿನಗಳಿಗೂ ಹೆಚ್ಚು ಕಾಲವಿಡಬೇಡಿ.
ಮಾರುಕಟ್ಟೆಯಲ್ಲಿ ಲಭ್ಯವಿರುವ ಪಾಶ್ಚರೈಸ್ ಮಾಡಲಾದ ಮೊಟ್ಟೆಗಳನ್ನೇ ಖರೀದಿಸಿ. ಬಿರುಕು ಇರುವ,ಹೊಲಸಾದ ಮೊಟ್ಟೆಗಳನ್ನು ತಿರಸ್ಕರಿಸಿ.
ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸುವುದರಿಂದ ಅವುಗಳಲ್ಲಿರುವ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾಗಳು ಸಾಯುತ್ತವೆ.
ಅಕಸ್ಮಾತ್ ಸಾಲ್ಮೊನೆಲ್ಲಾ ಸೋಂಕು ತಗುಲಿದರೆ ಮತ್ತು 101.5 ಡಿಗ್ರಿ ಫ್ಯಾರೆನ್ಹೀಟ್ ಜ್ವರ, ಮೂರು ದಿನಗಳಿಗೂ ಅಧಿಕ ಸಮಯದಿಂದ ಭೇದಿ, ನಿಲ್ಲದ ವಾಂತಿ,ಮಲದಲ್ಲಿ ರಕ್ತ ಹಾಗೂ ಕಡಿಮೆ ಮೂತ್ರ,ಎದ್ದು ನಿಲ್ಲುವಾಗ ತಲೆ ಸುತ್ತುವಿಕೆ,ಬಾಯಿ ಮತ್ತು ಗಂಟಲು ಒಣಗಿದಂತಹ ನಿರ್ಜಲೀಕರಣದ ಲಕ್ಷಣಗಳಿದ್ದರೆ ತಕ್ಷಣ ವೈದ್ಯರನ್ನು ಕಾಣುವುದು ಒಳ್ಳೆಯದು.