ಸ್ಯಾಫ್ ಫುಟ್ಬಾಲ್ ಟೂರ್ನಿ: ‘ಬಿ’ ಗುಂಪಿನಲ್ಲಿ ಭಾರತ

ಹೊಸದಿಲ್ಲಿ, ಎ.18: ಏಳು ಬಾರಿಯ ಚಾಂಪಿಯನ್ ಭಾರತ ತಂಡ ಸ್ಯಾಫ್ ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ‘ಬಿ’ ಗುಂಪಿನಲ್ಲಿ ಮಾಲ್ಡೀವ್ಸ್ ಹಾಗೂ ಶ್ರೀಲಂಕಾ ತಂಡಗಳೊಂದಿಗೆ ಸ್ಥಾನ ಪಡೆದಿದೆ. ‘ಎ’ ಗುಂಪಿನಲ್ಲಿ ಟೂರ್ನಿಯ ಆತಿಥ್ಯವಹಿಸಿಕೊಂಡಿರುವ ಬಾಂಗ್ಲಾದೇಶ ತಂಡ ನೇಪಾಳ, ಪಾಕಿಸ್ತಾನ ತಂಡದೊಂದಿಗೆ ಸ್ಥಾನ ಪಡೆದಿದೆ.
ಸ್ಯಾಫ್ ಸುಝುಕಿ ಕಪ್ ಪ್ರೀಮಿಯರ್ ಫುಟ್ಬಾಲ್ ಟೂರ್ನಮೆಂಟ್ ಬಾಂಗ್ಲಾದೇಶದಲ್ಲಿ ಸೆ.4 ರಿಂದ 15ರ ತನಕ ನಡೆಯಲಿದೆ. ಬಾಂಗ್ಲಾದೇಶದಲ್ಲಿ ಮೂರನೇ ಬಾರಿ ಈ ಟೂರ್ನಿಯು ನಡೆಯುತ್ತಿದೆ.
ಭಾರತ ಸ್ಯಾಫ್‌ಕಪ್ ಫೈನಲ್‌ನಲ್ಲಿ ಮಾಲ್ಡೀವ್ಸ್ ತಂಡವನ್ನು ಮೂರು ಬಾರಿ ಎದುರಿಸಿದೆ. 1997 ಹಾಗೂ 2009ರಲ್ಲಿ ಮಾಲ್ಡೀವ್ಸ್ ತಂಡವನ್ನು ಸೋಲಿಸಿದೆ. 2008ರಲ್ಲಿ ಮಾಲ್ಡೀವ್ಸ್ ತಂಡ ಭಾರತವನ್ನು ಮಣಿಸುವುದರೊಂದಿಗೆ ಪ್ರತಿಷ್ಠಿತ ಪ್ರಶಸ್ತಿ ಗೆದ್ದುಕೊಂಡಿತ್ತು. 2015ರಲ್ಲಿ ಫೈನಲ್‌ನಲ್ಲಿ ಅಫ್ಘಾನಿಸ್ತಾನವನ್ನು ಮಣಿಸಿರುವ ಭಾರತ ಹಾಲಿ ಚಾಂಪಿಯನ್ ಆಗಿದೆ. ಬಂಗಬಂಧು ನ್ಯಾಶನಲ್ ಸ್ಟೇಡಿಯಂನಲ್ಲಿ ಎಲ್ಲ ಪಂದ್ಯಗಳು ನಡೆಯಲಿದ್ದು, ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ಗೆ ತೇರ್ಗಡೆಯಾಗಲಿವೆ.
ಏಳು ಬಾರಿ ಸ್ಯಾಫ್‌ಕಪ್‌ನ್ನು ಜಯಿಸಿ ದಾಖಲೆ ನಿರ್ಮಿಸಿರುವ ಭಾರತ ಮೂರು ಬಾರಿ ರನ್ನರ್ಸ್-ಅಪ್ ಪ್ರಶಸ್ತಿ ಜಯಿಸಿದೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ, ಮಾಲ್ಡೀವ್ಸ್ ಹಾಗೂ ಶ್ರೀಲಂಕಾ ತಲಾ ಒಂದು ಬಾರಿ ಕಪ್‌ನ್ನು ಗೆದ್ದುಕೊಂಡಿವೆ.





