ಐಪಿಎಲ್: ಕೋಲ್ಕತಾ ಗೆಲುವಿನ ಕೇಕೆ
ರಾಜಸ್ಥಾನ ವಿರುದ್ಧ ಏಳು ವಿಕೆಟ್ ಜಯ

ಜೈಪುರ, ಎ.18: ರಾಬಿನ್ ಉತ್ತಪ್ಪ ನೇತೃತ್ವದಲ್ಲಿ ಸಂಘಟಿತ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧದ 15ನೇ ಐಪಿಎಲ್ ಪಂದ್ಯವನ್ನು 7 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ.
ಗೆಲ್ಲಲು 161 ರನ್ ಗುರಿ ಪಡೆದಿದ್ದ ಕೋಲ್ಕತಾ 18.5 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 163 ರನ್ ಗಳಿಸಿತು. 4ನೇ ವಿಕೆಟ್‌ನಲ್ಲಿ ಮುರಿಯದ ಜೊತೆಯಾಟದಲ್ಲಿ 61 ರನ್ ಸೇರಿಸಿದ ನಿತೀಶ್ ರಾಣಾ(ಔಟಾಗದೆ 35,27 ಎಸೆತ, 2 ಬೌಂಡರಿ, 1 ಸಿಕ್ಸರ್) ಹಾಗೂ ನಾಯಕ ದಿನೇಶ್ ಕಾರ್ತಿಕ್(ಔಟಾಗದೆ 42, 23 ಎಸೆತ, 2 ಬೌಂಡರಿ, 2 ಸಿಕ್ಸರ್) ಇನ್ನೂ ಏಳು ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇನಿಂಗ್ಸ್‌ನ 3ನೇ ಎಸೆತದಲ್ಲಿ ಕ್ರಿಸ್ ಲಿನ್(0) ವಿಕೆಟ್ ಕಳೆದುಕೊಂಡ ಕೋಲ್ಕತಾ ಕಳಪೆ ಆರಂಭ ಪಡೆದಿತ್ತು. ಆಗ ಎರಡನೇ ವಿಕೆಟ್‌ಗೆ 69 ರನ್ ಜೊತೆಯಾಟ ನಡೆಸಿದ ಉತ್ತಪ್ಪ(48,36 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ಸುನೀಲ್ ನರೇನ್(35, 25 ಎಸೆತ, 5 ಬೌಂಡರಿ, 1 ಸಿಕ್ಸರ್)ತಂಡವನ್ನು ಆಧರಿಸಿದರು.
ರಾಜಸ್ಥಾನದ ಪರ ಕೆ.ಗೌತಮ್(2-23)ಎರಡು ವಿಕೆಟ್ ಪಡೆದರು.
ಇದಕ್ಕೆ ಮೊದಲು ನಾಯಕ ಅಜಿಂಕ್ಯ ರಹಾನೆ ಹಾಗೂ ಶಾರ್ಟ್ ಮೊದಲ ವಿಕೆಟ್‌ಗೆ ದಾಖಲಿಸಿದ ಅರ್ಧಶತಕದ ಜೊತೆಯಾಟದ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ತಂಡದ ಗೆಲುವಿಗೆ 161 ರನ್ ಗುರಿ ನೀಡಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 160 ರನ್ ಗಳಿಸಿದೆ.
ಇನಿಂಗ್ಸ್ ಆರಂಭಿಸಿದ ರಹಾನೆ(36,19 ಎಸೆತ, 5 ಬೌಂಡರಿ,1 ಸಿಕ್ಸರ್) ಹಾಗೂ ಶಾರ್ಟ್(44,43 ಎಸೆತ, 5 ಬೌಂಡರಿ, 1 ಸಿಕ್ಸರ್)ಮೊದಲ ವಿಕೆಟ್‌ಗೆ 54 ರನ್ ಸೇರಿಸಿ ಉತ್ತಮ ಆರಂಭ ನೀಡಿದರು.
ಆದರೆ, ಈ ಇಬ್ಬರು ಬೇರ್ಪಟ್ಟ ಬಳಿಕ ರಾಜಸ್ಥಾನ ಕುಸಿತದ ಹಾದಿ ಹಿಡಿಯಿತು. ರಾಹುಲ್ ತ್ರಿಪಾಠಿ(15), ಬೆನ್ ಸ್ಟೋಕ್ಸ್(14) ದೊಡ್ಡ ಮೊತ್ತ ಗಳಿಸಲು ವಿಫಲರಾದರು.ಕೆ.ಗೌತಮ್(12)ಹಾಗೂ ಜೋಸ್ ಬಟ್ಲರ್(ಔಟಾಗದೆ 24) ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಕೋಲ್ಕತಾದ ಪರ ನಿತೀಶ್ ರಾಣಾ(2-11)ಹಾಗೂ ಕುರ್ರನ್(2-19) ತಲಾ ಎರಡು ವಿಕೆಟ್ ಪಡೆದರು.







