ಐಪಿಎಲ್ ಮೈದಾನಕ್ಕೆ ಡ್ಯಾಂ ನೀರು ಬಳಕೆಗೆ ಹೈಕೋರ್ಟ್ ತಡೆ

ಮುಂಬೈ, ಎ.18: ಐಪಿಎಲ್ ಪಂದ್ಯಗಳ ಆತಿಥ್ಯವಹಿಸಿಕೊಂಡಿರುವ ಪುಣೆಯ ಕ್ರಿಕೆಟ್ ಮೈದಾನಕ್ಕೆ ಪಾವನಾ ಡ್ಯಾಂ ನೀರನ್ನು ಮುಂದಿನ ಆದೇಶದ ತನಕ ಬಳಸಕೂಡದು ಎಂದು ಬಾಂಬೆ ಹೈಕೋರ್ಟ್ ಬುಧವಾರ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಗೆ(ಎಂಸಿಎ)ಆದೇಶ ನೀಡಿದೆ.
ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚಿಸುವಲ್ಲಿ ಕೇಂದ್ರದ ನಿರ್ಲಕ್ಷವನ್ನು ಖಂಡಿಸಿ ತಮಿಳುನಾಡಿನಾದ್ಯಂತ ಪ್ರತಿಭಟನೆ ತೀವ್ರಗೊಂಡ ಕಾರಣ ಚೆನ್ನೈನಲ್ಲಿ ನಿಗದಿಯಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಆಡಬೇಕಾಗಿದ್ದ ಐಪಿಎಲ್ ಪಂದ್ಯಗಳನ್ನು ಪುಣೆಗೆ ಸ್ಥಳಾಂತರಿಸಲಾಗಿತ್ತು.
ಪುಣೆಯಲ್ಲಿ ಐಪಿಎಲ್ ಪಂದ್ಯಗಳು ನಡೆದರೆ ಮೈದಾನದ ನಿರ್ವಹಣೆಗೆ ನೀರಿನ ವ್ಯವಸ್ಥೆ ಹೇಗೆ ಮಾಡಲಾಗುತ್ತದೆ ಎಂದು ಉತ್ತರಿಸುವಂತೆ ಎಂಸಿಎಗೆ ನ್ಯಾಯಾಲಯ ಈ ಹಿಂದೆ ನೋಟಿಸ್ ನೀಡಿತ್ತು.
2016ರಲ್ಲಿ ಲೋಕಸತ್ತಾ ಚಳವಳಿ ಎಂಬ ಎನ್‌ಜಿಒ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹಿನ್ನೆಲೆಯಲ್ಲಿ ನ್ಯಾಯಾಲಯ ಎಂಸಿಎಗೆ ನೋಟಿಸ್ ಜಾರಿ ಮಾಡಿತ್ತು. 2016ರಲ್ಲಿ ಮಹಾರಾಷ್ಟ್ರದ ಮೂರು ತಾಣಗಳಲ್ಲಿ ಆಯೋಜಿಸಲಾಗಿರುವ ಐಪಿಎಲ್ ಪಂದ್ಯಗಳ ಮೈದಾನದ ನಿರ್ವಹಣೆಗೆ 60 ಲಕ್ಷ ಲೀಟರ್ ಕುಡಿಯುವ ನೀರು ಬಳಸುವುದನ್ನು ಖಂಡಿಸಿ ಲೋಕಸತ್ತಾ ಮೂವ್‌ಮೆಂಟ್ ಅರ್ಜಿ ಸಲ್ಲಿಸಿತ್ತು.
ಅರ್ಜಿದಾರರ ಪರ ಹಾಜರಾಗಿರುವ ವಕೀಲ ರಾಕೇಶ್ ಸಿಂಗ್, ಈ ವರ್ಷ ಐಪಿಎಲ್‌ನ ಆರು ಪಂದ್ಯಗಳನ್ನು ಪುಣೆಯಲ್ಲಿ ಆಯೋಜಿಸಲಾಗುತ್ತಿದೆ. ಪುಣೆಗೆ ಪಾವನಾ ನದಿಯಿಂದ ನೀರು ಪೂರೈಸಲಾಗುತ್ತಿದೆ. ಒಂದು ವೇಳೆ ಎಂಸಿಎ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳು ನಡೆದರೆ, ನೀರನ್ನು ಹೇಗೆ ಪೂರೈಸಲಾಗುತ್ತದೆ ಎಂದು ರಾಜ್ಯ ಸರಕಾರ ನ್ಯಾಯಾಲಯಕ್ಕೆ ತಿಳಿಸಬೇಕೆಂದು ಒತ್ತಾಯಿಸಿದರು.







