ಉತ್ತರ ಪ್ರದೇಶ: 35 ವರ್ಷದ ಪುತ್ರಿಯ ಮೇಲೆ ಸ್ನೇಹಿತರ ಜತೆಗೂಡಿ ಅತ್ಯಾಚಾರ ನಡೆಸಿದ ತಂದೆ
ಕಾನ್ಪುರ,ಎ.19 : ತನ್ನಿಬ್ಬರು ಗೆಳೆಯರೊಂದಿಗೆ ಸೇರಿ ತನ್ನ 35 ವರ್ಷದ ಪುತ್ರಿಯನ್ನೇ ಅತ್ಯಾಚಾರಗೈದ ಆರೋಪದ ಮೇಲೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ವ್ಯಕ್ತಿಯೊಬ್ಬನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಘಟನೆ ಸೀತಾಪುರದ ಕಮಲಾಪುರ ಪ್ರದೇಶದಲ್ಲಿ ಎ.15ರಂದು ನಡೆದಿದೆಯೆನ್ನಲಾಗಿದೆ. ಆರೋಪಿಗಳಲ್ಲೊಬ್ಬನನ್ನು ಬಂಧಿಸಲಾಗಿದ್ದರೆ ಮಹಿಳೆಯ ತಂದೆ ಮತ್ತು ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾರೆ.
ಸಂತ್ರಸ್ತೆಗೆ ಪುತ್ರನೊಬ್ಬನಿದ್ದಾನೆ, ಆಕೆಗೆ 20 ವರ್ಷದ ಹಿಂದೆ ವಿವಾಹವಾಗಿದ್ದರೂ ಗಂಡನಿಂದ ಪ್ರತ್ಯೇಕಗೊಂಡಿದ್ದಳಲ್ಲದೆ ತನ್ನ ತಂದೆಯೊಂದಿಗೆ ವಾಸವಾಗಿದ್ದಳು.
ಎಪ್ರಿಲ್ 15ರಂದು ಆತ ತನ್ನ ಪುತ್ರಿಯನ್ನು ಕಮಲಾಪುರದ ಜಾತ್ರೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿಗೆ ತನ್ನ ಸ್ನೇಹಿತ ಮಾನ್ ಸಿಂಗ್ ನನ್ನು ಕೂಡ ಬರಲು ಹೇಳಿದ್ದ. ಇಬ್ಬರೂ ಆಕೆಯನ್ನು ಮೋಟಾರ್ ಸೈಕಲ್ ನಲ್ಲಿ ಹತ್ತಿಸಿ ತಮ್ಮ ಸ್ನೇಹಿತ ಮೇರಜ್ ನಿವಾಸಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಆಕೆಯನ್ನು ಕೋಣೆಯೊಂದರಲ್ಲಿ ಸುಮಾರು 18 ಗಂಟೆಗಳ ಕಾಲ ಕೂಡಿ ಹಾಕಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಅಲ್ಲಿಂದ ತಪ್ಪಿಸಿಕೊಂಡು ಬಂದ ಸಂತ್ರಸ್ತೆ ತನ್ನ ತಾಯಿಗೆ ನಡೆದ ಘಟನೆಯನ್ನು ವಿವರಿಸಿದ ನಂತರ ಪೊಲೀಸ್ ದೂರು ದಾಖಲಿಸಲಾಗಿತ್ತು.
ಆರೋಪಿಗೆ ತನ್ನ ಪುತ್ರಿಯ ಜತೆ ಅಕ್ರಮ ಸಂಬಂಧವಿದೆ ಎಂದು ಕಳೆದ ವರ್ಷ ಗ್ರಾಮ ಪಂಚಾಯತ್ ಆರೋಪಿಸಿತ್ತು. ನಂತರ ಆತನನ್ನು ಬಂಧಿಸಲಾಗಿತ್ತಾದರೂ ಫೆಬ್ರವರಿ ತಿಂಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು.