ಐಪಿಎಲ್:ಗೇಲ್ ಶತಕ, ಪಂಜಾಬ್ 193/3
ಚಂಡೀಗಡ, ಎ.19: ಆರಂಭಿಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಭರ್ಜರಿ ಶತಕದ ನೆರವಿನಿಂದ ಆತಿಥೇಯ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸನ್ರೈಸರ್ಸ್ ಹೈದರಾಬಾದ್ ತಂಡದ ಗೆಲುವಿಗೆ 194 ರನ್ ಗುರಿ ನೀಡಿದೆ.
ಇಲ್ಲಿ ಗುರುವಾರ ನಡೆದ ಐಪಿಎಲ್ನ 16ನೇ ಪಂದ್ಯದಲ್ಲಿ ಟಾಸ್ ಜಯಿಸಿದ ಪಂಜಾಬ್ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ಗಳ ನಷ್ಟಕ್ಕೆ 193 ರನ್ ಗಳಿಸಿತು.
18.2 ಓವರ್ನಲ್ಲಿ ಕೌಲ್ ಎಸೆತದಲ್ಲಿ ಒಂದು ರನ್ ಗಳಿಸಿದ ಗೇಲ್ ಐಪಿಎಲ್ನಲ್ಲಿ ಆರನೇ ಹಾಗೂ ಟ್ವೆಂಟಿ-20 ಕ್ರಿಕೆಟ್ನಲ್ಲಿ 21ನೇ ಶತಕ ದಾಖಲಿಸಿದರು.
ಗೇಲ್ 58 ಎಸೆತಗಳಲ್ಲಿ 1 ಬೌಂಡರಿ, 11 ಸಿಕ್ಸರ್ಗಳ ಸಹಾಯದಿಂದ 11ನೇ ಆವೃತ್ತಿಯ ಐಪಿಎಲ್ನಲ್ಲಿ ಮೊದಲ ಶತಕ ಸಿಡಿಸಿದ ದಾಂಡಿಗ ಎನಿಸಿಕೊಂಡರು. ಗೇಲ್ 63 ಎಸೆತಗಳಲ್ಲಿ ಔಟಾಗದೆ 104 ರನ್ ಗಳಿಸಿ ತಂಡ ಉತ್ತಮ ಮೊತ್ತ ಗಳಿಸಲು ನೆರವಾದರು. ಆ್ಯರೊನ್ ಫಿಂಚ್ ಔಟಾಗದೆ 14 ರನ್ ಗಳಿಸಿದರು.
ಇನಿಂಗ್ಸ್ ಆರಂಭಿಸಿದ ಕೆ.ಎಲ್.ರಾಹುಲ್(18) ಹಾಗೂ ಕ್ರಿಸ್ ಗೇಲ್ ಮೊದಲ ವಿಕೆಟ್ನಲ್ಲಿ 7.5 ಓವರ್ಗಳಲ್ಲಿ 53 ರನ್ ಜೊತೆಯಾಟ ನಡೆಸಿ ಉತ್ತಮ ಬುನಾದಿ ಹಾಕಿಕೊಟ್ಟರು.ರಾಹುಲ್ರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದ ರಶೀದ್ ಖಾನ್ ಈ ಜೋಡಿಯನ್ನು ಬೇರ್ಪಡಿಸಿದರು.
ಮಾಯಾಂಕ್ ಅಗರವಾಲ್ 18 ರನ್ ಗಳಿಸಿ ಔಟಾದರು. ಕರುಣ್ ನಾಯರ್(31,21 ಎಸೆತ, 3 ಬೌಂಡರಿ, 1 ಸಿಕ್ಸರ್) ಅವರೊಂದಿಗೆ 3ನೇ ವಿಕೆಟ್ಗೆ 85 ರನ್ ಜೊತೆಯಾಟ ನಡೆಸಿದ ಗೇಲ್ ತಂಡವನ್ನು ಉತ್ತಮ ಮೊತ್ತದತ್ತ ಕೊಂಡೊಯ್ದರು.