ಬಿಜೆಪಿ ಸೇರಿದ ಎತ್ತಿನಹೊಳೆ ಹೋರಾಟಗಾರ ಶಶಿರಾಜ್ ಶೆಟ್ಟಿ

ಮಂಗಳೂರು, ಎ.20: ಸಾಮರಸ್ಯ ಸಹಬಾಳ್ವೆ, ಸೌಹಾರ್ದ ವಾತಾವರಣ ನಿರ್ಮಾಣದ ಉದ್ದೇಶದಿಂದ ತಮ್ಮ ಸಂಪರ್ಕದಲ್ಲಿರುವ ಜಿಲ್ಲೆಯ ಅಲ್ಪಸಂಖ್ಯಾತ ಬಂಧುಗಳು ಬಿಜೆಪಿ ಸೇರ್ಪಡೆಗೆ ಒಲವು ವ್ಯಕ್ತಪಡಿಸಿದ್ದಾರೆ ಎಂದು ಶಶಿರಾಜ್ ಶೆಟ್ಟಿ ಕೊಳಂಬೆ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ತಾನು ಬಿಜೆಪಿ ಸೇರ್ಪಡೆಯಾಗುತ್ತಿರುವುದಾಗಿ ಹೇಳಿದ ಅವರು, ಜಿಲ್ಲೆಯ ಕೋಮು ಸಮಸ್ಯೆಯನ್ನು ನಿಭಾಯಿಸಲಾಗದೆ, ತಪ್ಪು ನಿರ್ಧಾರ ಹಾಗೂ ಹೇಳಿಕೆಗಳಿಂದ ಕೋಮು ಭಾವನೆ ಹೆಚ್ಚಾಗುವಂತೆ ಮಾಡಿದ ಈ ಭಾಗದ ಮಂತ್ರಿಗಳ ಸರ್ವಾಧಿಕಾರ ಧೋರಣೆಯಿಂದ ಜಿಲ್ಲೆಯ ಹಿತಕ್ಕೆ ತಕ್ಕುದಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು. ಜಿಲ್ಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿರುವ ತಾನು ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ತೊರೆಯಲು ನಿರ್ಧರಿಸಿರುವುದಾಗಿ ಹೇಳಿದರು.
ಸಾಮಾಜಿಕ ಹೋರಾಟಗಳ ಜತೆ ಸಂಯುಕ್ತ ನೇತ್ರಾವತಿ ರಕ್ಷಣಾ ಸಮಿತಿಯ ಜಿಲ್ಲಾ ಸಂಚಾಲಕನಾಗಿ ವಿಜಯ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಅನೇಕ ಹೋರಾಟ, ಪ್ರತಿಭಟನೆ ಮಾಡಿದ್ದೇನೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಮಂತ್ರಿಗಳು ನೇತ್ರಾವತಿ ಹೋರಾಟದಲ್ಲಿ ಭಾಗವಹಿಸಿದವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಮುಖ್ಯಮಂತ್ರಿ ಸಭೆಯಲ್ಲಿ ಹೋರಾಟಗಾರರನ್ನು ಅವಮಾನಿಸಿದ್ದಾರೆ. ಬಿಜೆಪಿಯ ಸಂಸದ ನಳಿನ್ ಕುಮಾರ್ ಕಟೀಲ್‌ರವರು ಜಿಲ್ಲಾ ಹೋರಾಟ ಸಮಿತಿಯ ಮೂಲಕ ನೇತ್ರಾವತಿ ನದಿ ಪರವಾಗಿ ಧ್ವನಿ ಎತ್ತಿದ್ದಾರೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಎತ್ತಿನಹೊಳೆ ಯೋಜನೆ ಬಗ್ಗೆ ಪುನರ್ ಪರಿಶೀಲನೆ ನಡೆಸಿ ಜಿಲ್ಲೆಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ಶಶಿರಾಜ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ತುಂಬೆ ಗ್ರಾಪಂ ಮಾಜಿ ಅಧ್ಯಕ, ಮುಹಮ್ಮದ್ ವಳವೂರು, ಅಬ್ದುಲ್ ಜಬ್ಬಾರ್ ಮಿತ್ತಬೈಲ್, ಮುಸ್ತಫ, ಮೊಯ್ದಿನ್, ವಿಶ್ವನಾಥ ಪೂಜಾರಿ, ಬಶೀರ್ ಕೈಕಂಬ ಮೊದಲಾದವರು ಉಪಸ್ಥಿತರಿದ್ದರು.







