ಎ.23ರಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ: ಮೊಯ್ದಿನ್ ಬಾವ
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ

ಮಂಗಳೂರು, ಎ.20: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ವತಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎ.23ರಂದು ಪೂರ್ವಾಹ್ನ 11 ಗಂಟೆಗೆ ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದು ಕ್ಷೇತ್ರದ ಹಾಲಿ ಶಾಸಕ ಮೊಯ್ದಿನ್ ಬಾವ ತಿಳಿಸಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಾಮಪತ್ರ ಸಲ್ಲಿಕೆಗೆ ಮುಂಚಿತವಾಗಿ ಲೇಡಿಹಿಲ್ ಸರ್ಕಲ್‌ನಿಂದ ಪಕ್ಷದ ಕಾರ್ಯರ್ಕತರು, ಪದಾಧಿಕಾರಿಗಳು ಹಾಗೂ ಮತದಾರರ ಜತೆ ಪಾದಯಾತ್ರೆ ಮೂಲಕ ಕರಾವಳಿ ಮೈದಾನದಲ್ಲಿ ಸಮಾವೇಶಗೊಂಡು ಅಲ್ಲಿ ಸಭೆ ನಡೆಸಲಾಗುವುದು ಎಂದರು. ಅಲ್ಲಿಂದು ಐದು ಜನರೊಂದಿಗೆ ಮಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುವುದಾಗಿ ಅವರು ಹೇಳಿದರು.
ಪಕ್ಷದ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರನ್ನು ಅವರ ಮನೆಯಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದಿದ್ದಾಗಿ ತಿಳಿಸಿದ ಮೊಯ್ದಿನ್ ಬಾವಾ, ಕ್ಷೇತ್ರದಲ್ಲಿ ಪಕ್ಷದ ಹಿರಿಯ ನಾಯಕರಲ್ಲಿ ಯಾವುದೇ ರೀತಿಯ ಅಸಮಾಧಾನವಿಲ್ಲ ಎಂದರು.
ಹಿರಿಯ ನಾಯಕ ವಿಜಯ ಕುಮಾರ್ ಶೆಟ್ಟಿಯವರ ಆಶೀರ್ವಾದವನ್ನು ನಾನು ಪಡೆದಿದ್ದೇನೆ. ಅವರು ಪಕ್ಷದ ಶಿಸ್ತಿನ ಸಿಪಾಯಿ. ಅವರು ಅಸಮಾಧಾನಗೊಂಡಿದ್ದಾರೆ ಎಂಬುದು ಬಿಜೆಪಿಯವರ ಸೃಷ್ಟಿಸಿರುವ ಸುಳ್ಳು ಸುದ್ದಿ ಎಂದು ಮೊಯ್ದಿನ್ ಬಾವ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಹಾಗೂ ಮಂಗಳೂರು ಉತ್ತರ ಕ್ಷೇತ್ರದ ಉಸ್ತುವಾರಿ ದೇವಿಪ್ರಸಾದ್ ಶೆಟ್ಟಿ, ಗುರುಪುರ ಬ್ಲಾಕ್ ಅಧ್ಯಕ್ಷ ಸುರೇಂದ್ರ ಕಂಬಳಿ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಜಯಶೀಲ ಅಡ್ಯಂತಾಯ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಹೈಬ್, ಮೇಯರ್ ಭಾಸ್ಕರ ಮೊಯ್ಲಿ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಕಾರ್ಪೊರೇಟರ್ ದೀಪಕ್ ಪೂಜಾರಿ, ನವೀನ್ ಡಿಸೋಜ ಉಪಸ್ಥಿತರಿದ್ದರು.







