ರೋಹಿಂಗ್ಯ ಶಿಬಿರಕ್ಕೆ ಬೆಂಕಿ ಹಚ್ಚಿದ್ದು ನಾವೇ ಎಂದು ಟ್ವೀಟ್ ಮಾಡಿದ ಬಿಜೆಪಿ ಯುವ ಮೋರ್ಚಾ ನಾಯಕ; ದೂರು ದಾಖಲು

ಹೊಸದಿಲ್ಲಿ,ಎ.20 : ರಾಜಧಾನಿಯಲ್ಲಿ ರೋಹಿಂಗ್ಯ ನಿರಾಶ್ರಿತರ ಶಿಬಿರವೊಂದಕ್ಕೆ ಬೆಂಕಿ ಹಚ್ಚಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಒಪ್ಪಿಕೊಂಡಿದ್ದಾರೆನ್ನಲಾದ ಬಿಜೆಪಿ ಯುವ ಘಟಕದ ನಾಯಕರೊಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ‘ಆಲ್ ಇಂಡಿಯಾ ಮುಸ್ಲಿಂ ಮಜ್ಲಿಸ್-ಇ-ಮುಷವರತ್’ ಎಂಬ ಸಂಘಟನೆ ದಿಲ್ಲಿ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್ ಅವರನ್ನು ಪತ್ರ ಮುಖೇನ ಆಗ್ರಹಿಸಿದೆ.
ಭಾರತೀಯ ಜನತಾ ಯುವ ಮೋರ್ಚಾದ ಸದಸ್ಯನೆಂದು ಹೇಳಲಾದ ಮನೀಶ್ ಚಂಡೇಲಾ ಎಂಬಾತ ತನ್ನ ಟ್ವಿಟರ್ ಹ್ಯಾಂಡಲ್ @ಚಂಡೇಲಾ_ಬಿಜೆವೈಎಂ ಮೂಲಕ ಟ್ವೀಟ್ ಮಾಡಿ "ಹೌದು ನಾವು ರೋಹಿಂಗ್ಯ ಉಗ್ರರ ಮನೆಗಳಿಗೆ ಬೆಂಕಿ ಹಚ್ಚಿದ್ದೇವೆ,'' ಎಂದು ಒಪ್ಪಿಕೊಂಡಿದ್ದಾರೆಂದು ಸಂಘಟನೆ ಹೇಳಿಕೊಂಡಿದೆ.

ಚಂಡೇಲಾ ಅವರ ಟ್ವೀಟ್ ಗಳ ಸ್ಕ್ರೀನ್ ಶಾಟ್ ಗಳನ್ನೂ ಸಂಘಟನೆ ತನ್ನ ಪತ್ರದ ಜತೆಗೆ ಲಗತ್ತಿಸಿದೆ. ಮೊದಲ ಟ್ವೀಟ್ ಎಪ್ರಿಲ್ 15ರಂದು ಮಾಡಲಾಗಿದ್ದರೆ ಎರಡನೇ ಟ್ವೀಟ್ ಎಪ್ರಿಲ್ 16ರಂದು ಮಾಡಲಾಗಿತ್ತಲ್ಲದೆ “ಹೌದು ನಾವು ಮಾಡಿದ್ದೇವೆ ಹಾಗೂ ಮತ್ತೆ ಕೂಡ ಮಾಡುತ್ತೇವೆ #ರೋಹಿಂಗ್ಯಕ್ವಿಟ್‍ಇಂಡಿಯಾ'' ಎಂದು ಟ್ವೀಟ್ ಮಾಡಿದ್ದರು. ಚಂಡೇಲಾ ಟ್ವಿಟರ್ ಖಾತೆ ಅಂದಿನಿಂದ ಡಿಲೀಟ್ ಆಗಿದೆ.
ದಕ್ಷಿಣ ದಿಲ್ಲಿಯ ಕಲಿಂಡಿ ಕುಂಜ್ ಸಮೀಪವಿರುವ ರೋಹಿಂಗ್ಯ ನಿರಾಶ್ರಿತರ ಶಿಬಿರದಲ್ಲಿ ಎಪ್ರಿಲ್ 14ರ ರಾತ್ರಿ ಬೆಂಕಿ ಆಕಸ್ಮಿಕದಲ್ಲಿ ಸುಮಾರು 200 ನಿವಾಸಿಗಳು ತಮ್ಮ ವಸ್ತುಗಳನ್ನೆಲ್ಲಾ ಕಳೆದುಕೊಂಡಿದ್ದಾರೆ.








