ಬ್ರಿಟನ್‌ನಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ: ಕಾನೂನು ಕ್ರಮಕ್ಕೆ ಭಾರತದ ಆಗ್ರಹ

ಲಂಡನ್,ಎ.20: ಪ್ರಧಾನಿ ನರೇಂದ್ರ ಮೋದಿಯವರ ಬ್ರಿಟನ್ ಭೇಟಿಯ ಸಂದರ್ಭ ಎ.18ರಂದು ಇಲ್ಲಿಯ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ಭಾರತೀಯ ಧ್ವಜವನ್ನು ನಾಶಗೊಳಿಸಿದವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ಭಾರತವು ಆಗ್ರಹಿಸಿದೆ.
ಬ್ರಿಟನ್ ಸರಕಾರದೊಂದಿಗೆ ಈ ವಿಷಯವನ್ನು ಕೈಗೆತ್ತಿಕೊಳ್ಳಲಾಗಿದೆ ಮತ್ತು ಅತ್ಯುನ್ನತ ಮಟ್ಟದಲ್ಲಿ ನೋವನ್ನು ವ್ಯಕ್ತಪಡಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಈ ದುಷ್ಕೃತ್ಯದಲ್ಲಿ ಭಾಗಿಯಾದವರು ಮತ್ತು ಅದಕ್ಕೆ ಪ್ರಚೋದನೆ ನೀಡಿದವರ ವಿರುದ್ಧ ಕಾನೂನು ಕ್ರಮ ಸೇರಿದಂತೆ ಅಗತ್ಯ ಕ್ರಮಗಳನ್ನು ನಾವು ನಿರೀಕ್ಷಿಸಿದ್ದೇವೆ ಎಂದರು.
ಮೋದಿ ಅವರು ಇಲ್ಲಿಗೆ ಆಗಮಿಸಿದ ಬಳಿಕ ಕೆಲವು ಗುಂಪುಗಳು ಭಾರತದಲ್ಲಿಯ ದೌರ್ಜನ್ಯಗಳ ವಿರುದ್ಧ ಪ್ರತಿಭಟನೆ ನಡೆಸಿದ್ದವು.
ಬುಧವಾರ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ಕೆಲವು ಪ್ರತಿಭಟನಾಕಾರರು ಕಾಮನ್‌ವೆಲ್ತ್ ಸರಕಾರಗಳ ಮುಖ್ಯಸ್ಥರ ಸಭೆಯ ಪ್ರಯುಕ್ತ ಸ್ಥಾಪಿಸಲಾಗಿದ್ದ ಎಲ್ಲ 53 ಕಾಮನ್‌ವೆಲ್ತ್ ದೇಶಗಳ ಧ್ವಜಸ್ತಂಭಗಳ ಸಾಲಿನಲ್ಲಿದ್ದ ಭಾರತದ ತ್ರಿವರ್ಣ ಧ್ವಜವನ್ನು ಕಿತ್ತು ಅದನ್ನು ಹರಿದುಹಾಕಿದ್ದರು. ಪಾಕಿಸ್ತಾನ ಮೂಲದ ಸಂಸತ್‌ಸದಸ್ಯ ಲಾರ್ಡ್ ಅಹ್ಮದ್ ನೇತೃತ್ವದಲ್ಲಿ ತಥಾಕಥಿತ ‘ಮೋದಿ ವಿರುದ್ಧ ಅಲ್ಪಸಂಖ್ಯಾತರು’ ಗುಂಪಿನ ಆಶ್ರಯದಲ್ಲಿ ಸೇರಿದ್ದ ಖಲಿಸ್ತಾನ ಪರ ಪ್ರತಿಭಟನಾಕಾರರು ಮತ್ತು ಕಾಶ್ಮೀರಿ ಪ್ರತ್ಯೇಕತಾವಾದಿಗಳು ಈ ಕೃತ್ಯವೆಸಗಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬ್ರಿಟನ್‌ನಲ್ಲಿ ಭಾರತದ ವಿರುದ್ಧ ಹಿಂಸಾಚಾರವನ್ನು ಪದೇಪದೇ ಪ್ರಚೋದಿಸುತ್ತಿರುವ ಅಹ್ಮದ್ ವಿರುದ್ಧ ಕ್ರಮವನ್ನು ಕೈಗೊಳ್ಳುವಂತೆ ಬ್ರಿಟನ್ ಸರಕಾರದ ಮೇಲೆ ಒತ್ತಡಗಳು ಹೆಚ್ಚುತ್ತಿವೆ.
ಘಟನೆಯು ನಡೆದಾಗಿನಿಂದಲೂ ಬ್ರಿಟನ್ ಸರಕಾರವು ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕದಲ್ಲಿದೆ ಎಂದು ತಿಳಿಸಿದ ಬ್ರಿಟನ್ ವಿದೇಶಾಂಗ ಮತ್ತು ಕಾಮನ್‌ವೆಲ್ತ್ ಕಚೇರಿಯ ವಕ್ತಾರರು,ಜನರಿಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಕ್ಕು ಇದೆಯಾದರೂ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ಸಣ್ಣ ಗುಂಪೊಂದು ನಡೆಸಿದ ಈ ಕೃತ್ಯ ನಮಗೆ ನಿರಾಸೆಯನ್ನುಂಟು ಮಾಡಿದೆ. ನಮಗೆ ಈ ಬಗ್ಗೆ ಮಾಹಿತಿ ದೊರೆತ ತಕ್ಷಣ ಭಾರತದ ರಾಯಭಾರಿ ಯಶವರ್ಧನ ಕುಮಾರ ಸಿಂಗ್ ಅವರನ್ನು ಸಂಪರ್ಕಿಸಿದ್ದೇವೆ ಎಂದರು.
ಭಾರತೀಯ ತ್ರಿವರ್ಣ ಧ್ವಜಕ್ಕೆ ಅವಮಾನವನ್ನುಂಟು ಮಾಡಿರುವ ಘಟನೆಯ ಬಗ್ಗೆ ತಾನು ತನಿಖೆ ನಡೆಸುತ್ತಿರುವುದಾಗಿ ಸ್ಕಾಟ್ಲಂಡ್ ಯಾರ್ಡ್ ಹೇಳಿಕೆಯಲ್ಲಿ ತಿಳಿಸಿದೆ.
ಘಟನೆ ನಡೆದ ಸಂದರ್ಭ ಪ್ರತಿಭಟನಾಕಾರರಿಂದ ತಳ್ಳಾಟಕ್ಕೆ ಗುರಿಯಾಗಿದ್ದ ಆಜ್‌ತಕ್ ಸುದ್ದಿವಾಹಿನಿಯ ಪ್ರತಿನಿಧಿ ಲವೀನಾ ಟಂಡನ್ ಅವರೂ ಮಹಾನಗರ ಪೊಲೀಸ್ ಬಳಿ ದೂರು ದಾಖಲಿಸಿದ್ದಾರೆ.
ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದ ಪ್ರತಿಭಟನಾಕಾರರು ತ್ರಿವರ್ಣ ಧ್ವಜವನ್ನು ಚೂರುಚೂರಾಗಿಸಿದ್ದರು. ಅದರ ಬೆನ್ನಿಗೇ ತನ್ನನ್ನು ತಳ್ಳಲಾಗಿತ್ತು, ಅವಾಚ್ಯವಾಗಿ ನಿಂದಿಸಿ ಬೆದರಿಕೆ ಒಡ್ಡಲಾಗಿತ್ತು ಎಂದು ಅವರು ದೂರಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿಯೂ ಈ ಘಟನೆ ವೈರಲ್ ಆಗಿದ್ದು, ಆಘಾತಕ್ಕೊಳಗಾಗಿರುವ ಜನರು ಪತ್ರಕರ್ತೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪಂಜಾಬ್‌ನಲ್ಲಿ ಕೊಲೆ ಆರೋಪಗಳನ್ನು ಹೊತ್ತು ಜೈಲಿನಲ್ಲಿರುವ ಜಗ್ತಾರ್ ಸಿಂಗ್ ಜೋಹಲ್ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನಾಕಾರರು ‘ಫ್ರೀ ಜಗ್ಗಿ’ ಬರಹವಿದ್ದ ಟಿ-ಶರ್ಟ್‌ಗಳನ್ನು ಧರಿಸಿ,ಪೋಸ್ಟರ್‌ಗಳನ್ನು ಪ್ರದರ್ಶಿಸಿದ್ದರು.







