ಸಿ.ಎಂ, ಜಿಟಿಡಿ ನಾಮಪತ್ರ ಸಲ್ಲಿಕೆ ವೇಳೆ ಪ್ರಕ್ಷುಬ್ಧ ವಾತಾವರಣ: ಲಘು ಲಾಠಿ ಪ್ರಹಾರ

ಮೈಸೂರು,ಎ.20: ನಾಮಪತ್ರ ಸಲ್ಲಿಸುವ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಒಂದೇ ಕಡೆ ಜಮಾಯಿಸಿದ ಪರಿಣಾಮ ಪ್ರಕ್ಷುಬ್ದ ವಾತಾವರಣ ಉಂಟಾಗಿ, ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ ಘಟನೆ ನಡೆಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿ ಶಾಸಕ ಜಿ.ಟಿ.ದೇವೇಗೌಡ ನಾಮ ಪತ್ರ ಸಲ್ಲಿಸುವ ವೇಳೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಉಭಯ ಪಕ್ಷಗಳ ಕಾರ್ಯಕರ್ತರು ಜಮಾವಣೆಗೊಂಡು ಪ್ರಕ್ಷುಬ್ಧ ವಾತಾವರಣ ಉಂಟಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಸಕ ಜಿ.ಟಿ.ದೇವೇಗೌಡ ಶುಕ್ರವಾರ ಒಳ್ಳೆಯ ದಿನ ಎಂದು ಒಂದೇ ದಿನ ನಾಮಪತ್ರ ಸಲ್ಲಿಸಲು ಮುಂದಾದರು. ಮೊದಲು ಸಿದ್ದರಾಮಯ್ಯ ಅವರಿಗೆ 12 ಗಂಟೆಯಿಂದ 1 ಗಂಟೆ ವರೆಗೆ ಅವಕಾಶ ನೀಡಿ, ಜಿ.ಟಿ.ದೇವೇಗೌಡ ಅವರಿಗೆ 1 ಗಂಟೆಯಿಂದ 2 ಗಂಟೆ ವರೆಗೆ ನಗರ ಪೊಲೀಸ್ ಆಯಕ್ತ ಸುಬ್ರಮಣೇಶ್ವರ ರಾವ್ ಅನುಮತಿ ನೀಡಿದ್ದರು. ಆದರೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಬಂದ ಜೆಡಿಎಸ್ ಕಾರ್ಯರ್ತರು, ಕಾಂಗ್ರೆಸ್ ಕಾರ್ಯಕರ್ತರನ್ನು ಅಣಕಿಸುವ ರೀತಿ ಬೈಕ್ ಮತ್ತು ಸ್ಕೂಟರ್ ಹಾಗೂ ಕಾರುಗಳಲ್ಲಿ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಇರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯನ್ನು ಬಳಸಿಕೊಂಡು ತಮ್ಮ ನಾಯಕರ ಪರ ಘೋಷಣೆಗಳನ್ನು ಕೂಗುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಇದರಿಂದಾಗಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಾಯಕರ ಪರ ಘೋಷಣೆಗಳನ್ನು ಕೂಗಿ ರ್ಯಾಲಿ ನಡೆಸಲು ಮುಂದಾದರು. ಇದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಇದರಿಂದ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ರ್ಯಾಲಿ ನಡೆಸಲು ಯತ್ನಿಸಿದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಪೊಲೀಸರು ಲಘು ಲಾಠಿ ಚಾರ್ಚ್ ಮಾಡಿದರು.
ಜೆಡಿಎಸ್ ಪಕ್ಷದ ಕಾರ್ಯಕರ್ತರು ಕೂಡ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಅನ್ನು ಬೇಧಿಸಿ ಮುಂದೆ ಬರಲು ಯತ್ನಿಸಿದರು. ಅವರನ್ನು ನಿಯಂತ್ರಿಸಲು ಸಹ ಪೊಲೀಸರು ಲಘು ಲಾಠಿ ಚಾರ್ಚ್ ಮಾಡಬೇಕಾಯಿತು. ನಂತರ ಎಚ್ಚೆತ್ತ ಡಿಸಿಪಿ ವಿಷ್ಣುವರ್ಧನ್ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಜೊತೆಗೆ ಕುದುರೆ ಪೊಲೀಸರು ಹಾಗೂ ಕಮಾಂಡೋಗಳನ್ನು ಸ್ಥಳದಲ್ಲಿ ನಿಯೋಜನೆಗೊಳಿಸಿ ಆಗಬಹುದಾದ ಅವಘಡವನ್ನು ತಪ್ಪಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸ್ ಆಯುಕ್ತ ಸುಬ್ರಮಣೇಶ್ವರ ರಾವ್ ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ಬಂದೋಬಸ್ತ್ ಮಾಡುವಂತೆ ಪೊಲೀಸರಿಗೆ ಸೂಚಿಸಿದರು.
ಪೊಲೀಸ್ ಪೇದೆ ಮೇಲೆ ಹಲ್ಲೆ:
ಜೆಡಿಎಸ್ ಕಾರ್ಯಕರ್ತರನ್ನು ನಿಯಂತ್ರಿಸುವ ವೇಳೆ ಅಲ್ಲಾಬಕ್ಷ್ ಎಂಬ ಪೊಲೀಸ್ ಪೇದೆಗೆ ಕಾರ್ಯಕತರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಪರಿಸ್ಥಿತಿ ಕೈಮೀರುವುದನ್ನು ಅರಿತ ಪೊಲೀಸರು ಲಾಠಿ ಚಾರ್ಚ್‍ಗೆ ಮುಂದಾದಾಗ ತಾವು ಕೈಯಲ್ಲಿ ಹಿಡಿದಿದ್ದ ಬಾವುಟದ ಕೋಲಲ್ಲಿ ಹೊಡೆದ ಪರಿಣಾಮ ಪೇದೆಯ ಎಡ ಭಾಗದ ಕುತ್ತಿಗೆಗೆ ಗಾಯವಾಯಿತು ಎನ್ನಲಾಗಿದೆ.







