ಉತ್ತರಪ್ರದೇಶ, ಚತ್ತೀಸ್‌ಗಢ: ವಿವಾಹ ಸಮಾರಂಭದಲ್ಲಿ ಇಬ್ಬರು ಬಾಲಕಿಯರ ಅತ್ಯಾಚಾರಗೈದು ಹತ್ಯೆ

ಆಗ್ರಾ, ಎ. 20: ಚತ್ತೀಸ್‌ಗಢ ಹಾಗೂ ಉತ್ತರಪ್ರದೇಶದಲ್ಲಿ ವಿವಾಹ ಸಮಾರಂಭದ ಸಂದರ್ಭ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಒಂದು ಘಟನೆ ಉತ್ತರಪ್ರದೇಶದ ಎತಾಹ್ ಜಿಲ್ಲೆಯಲ್ಲಿ ನಡೆದಿದೆ. ಎತಾಹ್ ಜಿಲ್ಲೆಯ ಅಲಿಗಂಜ್ ಪ್ರದೇಶದ ಕೇಲ್ತಾ ಗ್ರಾಮದಲ್ಲಿ ಸಮೀಪದ ಮನೆಗೆ ವಿವಾಹದ ‘ತಿಲಕ್’ ಕಾರ್ಯಕ್ರಮಕ್ಕೆ ಗುರುವಾರ ರಾತ್ರಿ ತೆರಳಿದ್ದ ಬಾಲಕಿ ನಾಪತ್ತೆಯಾಗಿದ್ದಳು. ಆಕೆಯ ಮೃತದೇಹ ಶುಕ್ರವಾರ ಮುಂಜಾನೆ 3 ಗಂಟೆಗೆ ಮನೆಯಿಂದ 100 ಕಿ.ಮೀ. ದೂರದಲ್ಲಿರುವ ಹೊಲದಲ್ಲಿ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ 25 ವರ್ಷದ ಪಿಂಟು ಕುಮಾರ್‌ನನ್ನು ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂಜಯ್ ಕುಮಾರ್ ಹೇಳಿದ್ದಾರೆ. ಇನ್ನೊಂದು ಘಟನೆ ಚತ್ತೀಸ್‌ಗಢ ಸಮೀಪದ ಕಬೀರ್‌ಧಾಮ್ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಬಾಘಾರ್ರದಲ್ಲಿ ನಡೆದ ವಿವಾಹ ಸಮಾರಂಭವೊಂದರ ಸಂದರ್ಭ ವಧುವಿನ ಗೆಳೆಯ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದಿದ್ದಾನೆ. ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿ ಉತ್ತಮ್ ಸಾಹು (25) ನನ್ನು ಬಂಧಿಸಿದ್ದಾರೆ.





