ಬಂಟ್ವಾಳ: ಲಾರಿ-ಕಾರು ಢಿಕ್ಕಿ; ಐವರಿಗೆ ಗಾಯ
.jpg)
ಬಂಟ್ವಾಳ, ಎ. 20: ನಿಯಂತ್ರಣ ತಪ್ಪಿದ ಲಾರಿಯೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಪ್ರಯಾಣಿಕರು ಗಂಭೀರ ಗಾಯಗೊಂಡ ಘಟನೆ ವಿಟ್ಲ-ಪುತ್ತೂರು ರಸ್ತೆಯ ಚಂದಳಿಕೆ ಎಂಬಲ್ಲಿ ಶುಕ್ರವಾರ ನಡೆದಿದೆ.-
ಕುಂಬಳೆ-ಕೆದೂರು ಸಮೀಪದ ಪಾದೆಕಲ್ಲಿನ ನಿವಾಸಿಗಳಾದ ಸದಾಶಿವ ಶೆಟ್ಟಿ (60), ಅವರ ಪತ್ನಿ ಸುಮಿತ್ರಾ (56), ಪುತ್ರ ಜಯಕುಮಾರ್ (32), ಪುತ್ತಿಗೆ ಬಾಣಬೈಲು ನಿವಾಸಿ ದಾಮೋದರ ಶೆಟ್ಟಿ (33), ಪತ್ನಿ ಜಯಲಕ್ಷ್ಮಿ (30), ಪುತ್ರ ಮೋಕ್ಷಿತ್ (5) ಗಾಯಗೊಂಡವರೆಂದು ಗುರುತಿಸಲಾಗಿದೆ.
ಸದಾಶಿವ ಶೆಟ್ಟಿ ಅವರು ತನ್ನ ಕುಟುಂಬ ಸಮೇತ ಕುಂಬಳೆಯಿಂದ ಪುತ್ತೂರಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ವಿಟ್ಲ ಸಮೀಪದ ಚಂದಳಿಕೆ ತಿರುವಿನಲ್ಲಿ ಪುತ್ತೂರು ಕಡೆಯಿಂದ ಬರುತ್ತಿದ್ದ ಕಲ್ಲು ಸಾಗಾಟದ ಲಾರಿ ನಿಯಂತ್ರಣ ತಪ್ಪಿ ಕಾರಿಗೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಕಾರಿನೊಳಗೆ ಸಿಕ್ಕಿಹಾಕಿಕೊಂಡಿದ್ದ ಐವರು ಪ್ರಯಾಣಿಕರನ್ನು ಸ್ಥಳೀಯರ ಸಹಕಾರರೊಂದಿಗೆ ಫ್ರೆಂಡ್ಸ್ ವಿಟ್ಲ ಆಂಬ್ಯುಲೆನ್ಸ್ ಮೂಲಕ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಿಂದ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.





