ಮಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿಯಾಗಿ ವೇದವ್ಯಾಸ ಕಾಮತ್

ಮಂಗಳೂರು, ಎ. 20: ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಗುರುತಿಸಿಕೊಂಡಿದ್ದ ವೇದವ್ಯಾಸ ಕಾಮತ್ ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ತನ್ನ 6ನೆ ವಯಸ್ಸಿನಿಂದಲೂ ಶಾಖೆಗೆ ಹೋಗಿ ಸಂಸ್ಕಾರವನ್ನು ಅಳವಡಿಸಿಕೊಂಡವರು. ಸಂಘದ ವತಿಯಿಂದ ನಡೆಯುವ ಗಣೇಶೋತ್ಸವ, ರಕ್ಷಾ ಬಂಧನ, ಗುರುಪೂರ್ಣಿಮೆ, ಪಥಸಂಚಲನ, ಯುಗಾದಿ ಉತ್ಸವ ಇತ್ಯಾದಿಗಳಲ್ಲಿ ಭಾಗವಹಿಸಿಕೊಂಡು ಬಂದವರು.
ಡಿ.ವಾಮನ್ ಕಾಮತ್ ಹಾಗೂ ಡಿ.ತಾರಾ.ವಿ.ಕಾಮತ್ ದಂಪತಿ ಪುತ್ರರಾಗಿ 7-12-1977 ರಲ್ಲಿ ಜನಿಸಿದರು. ಮಂಗಳೂರಿನ ಕೆನರಾ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿ ಕೆನರಾ ಕಾಲೇಜಿನಲ್ಲಿ ಬಿ.ಕಾಂ ಪಧವಿ ಪಡೆದಿದ್ದಾರೆ. 16 ವರ್ಷಗಳ ಹಿಂದೆ ಮಂಗಳೂರಿನಲ್ಲಿ ಅವರು ಸ್ಥಾಪಕಾಧ್ಯಕ್ಷರಾಗಿ ಇಂದಿಗೂ ಮುನ್ನಡೆಸಿಕೊಂಡು ಬಂದಿರುವ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಮೂಲಕ ಸಮಾಜ ಸೇವೆಯನ್ನು ಮುಂದುವಿಸಿಕೊಂಡು ಬಂದಿದ್ದಾರೆ.
ಟ್ರಸ್ಟ್ ಹಲವು ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಸುಮಾರು 70ಕ್ಕೂ ಹೆಚ್ಚಿನ ಅನಾಥ ವಯೋವೃದ್ಧರ ಬ್ಯಾಂಕ್ ಖಾತೆಗೆ ಪ್ರತೀ ತಿಂಗಳು ಧನ ಸಹಾಯ, ಬಡ ಮಕ್ಕಳ ಶಾಲೆ ಶುಲ್ಕ, ಬಡ ರೋಗಿಗಳಜಿ ಆಸ್ಪತ್ರೆ ವೆಚ್ಚ, ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚ ಸಹಿತ ಮೂಡುಬಿದಿರೆಯ ಕಡಲಕೆರೆ ಸರಕಾರಿ ಶಾಲೆಯನ್ನು ತಮ್ಮ ಸೇವಾಂಜಲಿ ಎಜುಕೇಷನ್ ಟ್ರಸ್ಟ್ ಮುಖಾಂತರ ದತ್ತು ಸ್ವೀಕಾರ ಮಾಡಿದ್ದಾರೆ.
ತಮ್ಮ ಕುಟುಂಬದ ತವರು ಊರಾದ ಕುಂದಾಪುರ ತಾಲ್ಲೂಕಿನ ಸಿದ್ದಾಪುರದಲ್ಲಿ ವೆಂಕಟರಮಣ ಎಜುಕೇಷನಲ್ ಟ್ರಸ್ಟ್ ಸಂಸ್ಥೆಯ ನೆರಳಿನಲ್ಲಿ ಅವರ ಕುಟುಂಬಿಕರು ಆರಂಭಿಸಿದ್ದ ಸರಸ್ವತಿ ವಿದ್ಯಾಮಂದಿರ ಎಂಬ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೊಂಚಾಡಿ ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿ, ಭಟ್ಕಳದ ಶಿರಾಲಿ ಯಲ್ಲಿರುವ ತಮ್ಮ ಕುಲದೇವರಾದ ಇತಿಹಾಸ ಪ್ರಸಿದ್ಧ ಮಹಾಗಣಪತಿ ದೇವಸ್ಥಾನದ ಗೌರವ ಸಲಹೆಗಾರ, ಮಂಗಳೂರಿನಲ್ಲಿರುವ ಭುವನೇಂದ್ರ ವಿವಿಧೋದ್ದೇಶ ಸಹಕಾರಿ ನಿಯಮಿತ ಬ್ಯಾಂಕ್ ನಿರ್ದೇಶಕರಾಗಿರುತ್ತಾರೆ.







