ಕಥುವಾ ಅತ್ಯಾಚಾರ ಖಂಡಿಸಿ ಕಾರ್ಟೂನ್ ರಚಿಸಿದ ಕಲಾವಿದೆಯ ಮನೆಗೆ ಕಲ್ಲುತೂರಾಟ, ಜೀಪಿಗೆ ಹಾನಿ

ತಿರುವನಂತಪುರಂ, ಎ.20: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ನಡೆದ 8 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ, ಕಾರ್ಟೂನ್ ಚಿತ್ರಗಳ ಮೂಲಕ ಪ್ರತಿಭಟನೆ ನಡೆಸಿದ ಕಲಾವಿದರ ಮನೆಯ ಮೇಲೆ ದಾಳಿ ನಡೆಸಿದ ಘಟನೆ ಮಂಗಳವಾರ ರಾತ್ರಿ ನಡೆದಿರುವುದಾಗಿ ವರದಿಯಾಗಿದೆ.
ದುರ್ಗಾ ಮಾಲತಿ ಎಂಬ ಕಲಾವಿದೆಯ ಪಾಲಕ್ಕಾಡ್‌ನ ನಿವಾಸದ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ಆಕೆಯನ್ನು ನಿಂದಿಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ. ಮನೆಯ ಮೇಲೆ ಕಲ್ಲೆಸೆದು, ಮನೆಯೆದುರು ನಿಲ್ಲಿಸಿದ್ದ ಜೀಪಿಗೆ ಹಾನಿ ಎಸಗಿದ್ದಾರೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಸಣ್ಣ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳ ಕೃತ್ಯ ಖಂಡಿಸಿ ತಾನು ಬಿಡಿಸಿರುವ ಕಾರ್ಟೂನ್‌ಗಳನ್ನು ತನ್ನ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದೆ. ಇದಕ್ಕೆ ಬೆಂಬಲ ಸೂಚಿಸಿರುವವರು ಹಾಗೂ ಶೇರ್ ಮಾಡಿರುವವರ ಬಗ್ಗೆಯೂ ಸಾಮಾಜಿಕ ಮಾಧ್ಯಮದಲ್ಲಿ ನಿಂದಿಸಿ ಕಿರುಕುಳ ನೀಡಲಾಗಿದೆ. ಕಾರ್ಟೂನ್ ಬಿಡಿಸಿದ ತಾನು ಹಾಗೂ ತನ್ನನ್ನು ಬೆಂಬಲಿಸಿದ ಸ್ನೇಹಿತರು ಆನ್‌ಲೈನ್ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇವೆ ಎಂದು ತಿಳಿಸಿರುವ ಮಾಲತಿ, ಘಟನೆಯ ಬಗ್ಗೆ ಪೊಲೀಸರಲ್ಲಿ ದೂರು ನೀಡಿದ್ದೇನೆ ಎಂದಿದ್ದಾರೆ.
ನನ್ನ ಫೇಸ್‌ಬುಕ್ ಪುಟದ ತುಂಬಾ ನಿಂದನೆ, ಅತ್ಯಾಚಾರ ಮತ್ತು ಕೊಲೆ ಬೆದರಿಕೆ ತುಂಬಿಕೊಂಡಿದೆ. ನಾನೇನು ತಪ್ಪು ಮಾಡಿದ್ದೇನೆ. ಅತ್ಯಾಚಾರಿಗಳ ಕೃತ್ಯ ಖಂಡಿಸಿ ಕಾರ್ಟೂನ್ ರಚಿಸಿರುವುದು ತಪ್ಪೇ ಎಂದು ಮಾಲತಿ ಪ್ರಶ್ನಿಸಿದ್ದಾರೆ. ತನಗೆ ನ್ಯಾಯ ದೊರಕದಿದ್ದರೆ, ಪ್ರಜಾಪ್ರಭುತ್ವ ವ್ಯವಸ್ಥೆ ಎಂಬುದು ದೊಡ್ಡದೊಂದು ಸುಳ್ಳಿನ ಕಂತೆ ಎಂಬ ಭಾವನೆ ತನ್ನಲ್ಲಿ ಮೂಡಲಾರಂಭಿಸುತ್ತದೆ ಎಂದವರು ಹೇಳಿದ್ದಾರೆ. ಈ ಮಧ್ಯೆ ಹೈದರಾಬಾದ್ ಪೊಲೀಸರು, ತನ್ನ ಫೇಸ್‌ಬುಕ್‌ನಲ್ಲಿ ಹಿಂದೂಗಳ ಭಾವನೆಗೆ ಘಾಸಿ ಎಸಗುವ ರೀತಿಯಲ್ಲಿ ಹಾಗೂ ರಾಮಭಕ್ತರಿಗೆ ಅವಮಾನವಾಗುವ ರೀತಿಯಲ್ಲಿ ಕಾರ್ಟೂನ್ ಬಿಡಿಸಿರುವ ಆರೋಪದಲ್ಲಿ ದುರ್ಗಾ ಮಾಲತಿಯ ವಿರುದ್ಧ ಸೋಮವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.







