ಎಸ್ಕೆಎಸೆಸೆಫ್ ಮಂಗಳೂರು ವಲಯ ಸಮಿತಿಯಿಂದ ಪ್ರತಿಭಟನೆ

ಮಂಗಳೂರು, ಎ. 20: ಕಥುವಾದಲ್ಲಿ ಇತ್ತೀಚೆಗೆ 8ರ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಎಸ್ಕೆಎಸೆಸೆಫ್ ಮಂಗಳೂರು ವಲಯ ಸಮಿತಿಯ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದ ಎದುರು ಪ್ರತಿಭಟನೆ ನಡೆಯಿತು.
ಎಸ್ಕೆಎಸೆಸೆಫ್ ಕೇಂದ್ರ ಸಮಿತಿಯ ಕೌನ್ಸಿಲರ್ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಹೆಣ್ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರದ ವಿರುದ್ಧ ಮೌನವಾಗಿದ್ದಾರೆ. ದೇಶದ ಜನತೆಯ ಪರವಾಗಿ ಈ ವಿಚಾರದಲ್ಲಿ ಮಾತನಾಡಬೇಕು. ಅಪರಾಧಿಗಳೊಂದಿಗೆ ಕೋಮುವಾದಿಗಳು ಸೇರಿಕೊಂಡಿದ್ದಾರೆ. ಇಂತಹ ಕೋಮು ಶಕ್ತಿಗಳ ಅಟ್ಟಹಾಸಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಎಸ್ಕೆಎಸೆಸೆಫ್ ಜಿಲ್ಲಾ ಕೋಶಾಧಿಕಾರಿ ಸಯ್ಯಿದ್ ಅಮೀರ್ ತಂಙಳ್ ಕಿನ್ಯ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿಯ ಜೊತೆ ಕಾರ್ಯದರ್ಶಿ ಸದಖತುಲ್ಲಾಹ್ ಫೈಝಿ ಉದ್ಘಾಟನಾ ಭಾಷಣ ಮಾಡಿದರು. ಮಂಗಳೂರು ವಲಯ ಸಮಿತಿಯ ಅಧ್ಯಕ್ಷ ರಿಯಾಝ್ ರಹ್ಮಾನಿ ಕಿನ್ಯ ಸ್ವಾಗತಿಸಿದರು.
ಎಸ್ಕೆಎಸೆಸೆಫ್ ಕೈಕಂಬ ವಲಯ ಸಮಿತಿ:
ಕುಥುವಾದ 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ನಡೆಸಿರುವುದನ್ನು ಖಂಡಿಸಿ ಎಸ್ಕೆಎಸೆಸೆಫ್ ಕೈಕಂಬ ವಲಯ ಸಮಿತಿಯ ವತಿಯಿಂದ ಶುಕ್ರವಾರ ಗುರುಪುರ ಕೈಕಂಬ ಮುಖ್ಯ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ದ.ಕ. ಜಿಲ್ಲಾ ಕಾರ್ಯದರ್ಶಿ ಎಂ.ಎ.ಮುಹಮ್ಮದ್ ಕುಂಞಿ ಮಾಸ್ಟರ್, ಎಸ್ಕೆಎಸೆಸೆಫ್ ಕಾರ್ಯದರ್ಶಿ ಇಕ್ಬಾಲ್ ಬಾಳಿಲಿ, ಕೈಕಂಬ ವಲಯಾಧ್ಯಕ್ಷ ಜಮಾಲುದ್ದೀನ್ ದಾರಿಮಿ, ಕಾರ್ಯದರ್ಶಿ ಆರಿಫ್ ಕಮ್ಮಾಜೆ, ಜಂಇಯ್ಯತುಲ್ ಮುಅಲ್ಲಿಮೀನ್ ಗುರುಪುರ ರೇಂಜ್ ಅಧ್ಯಕ್ಷ ಅಬ್ದುಲ್ ಮಜೀದ್ ದಾರಿಮಿ ಮತ್ತಿತರರು ಉಪಸ್ಥಿತರಿದ್ದರು.







