ಬೆಳ್ತಂಗಡಿ: ಕಾಂಗ್ರೆಸ್ ಅಭ್ಯರ್ಥಿ ವಸಂತ ಬಂಗೇರ ನಾಮಪತ್ರ ಸಲ್ಲಿಕೆ

ಬೆಳ್ತಂಗಡಿ, ಎ. 20: ಕಿವಿ ತುಂಬಿಸುವವರಿಗಿಂತ ಹೊಟ್ಟೆ ತುಂಬಿಸುವವಗೆ ಜನ ಅಧಿಕಾರ ನೀಡಬೇಕು. ಬಿಜೆಪಿ ಪಕ್ಷದವರ ಕಿವಿ ತುಂಬಿಸುವ ಮರಳು ಮಾತಿಗೆ ಮತದಾರರು ಬಲಿಯಾಗಬಾರದು ಎಂದು ಕೆಪಿಸಿಸಿ ಕಾರ್ಯದರ್ಶಿ ವೆಂಕಪ್ಪ ಗೌಡ ಹೇಳಿದರು.
ಅವರು ಶುಕ್ರವಾರ ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಕೆ ವಸಂತ ಬಂಗೇರರ ನಾಮಪತ್ರ ಸಲ್ಲಿಕೆ ನಿಮಿತ್ತ ಅಂಬೇಡ್ಕರ್ ಭವನದ ಸಮೀಪ ನಡೆದ ಕಾರ್ಯಕರ್ತರ ಬೃಹತ್ ಸಮಾರಂಭವನ್ನು ಉದ್ಧೇಶಿಸಿ ಮಾತನಾಡಿದರು.
ವಸಂತ ಬಂಗೇರ ರಾಜ್ಯ ಕಂಡ ಸಜ್ಜನ ರಾಜಕಾರಣಿ. ಅವರು ಜನರ ಸೇವೆ ಮಾಡಿದ್ದಕ್ಕಾಗಿ ಋಣ ತೀರಿಸುವ ಕೆಲಸ ಮತದಾರರು ಮಾಡಬೇಕು. ಬಂಗೇರರಲ್ಲಿ ಇರುವ ಗಂಬೀರತೆಯಿಂದಾಗಿ , ಕೆಲಸ ಮಾಡದ ಅಧಿಕಾರಿಗಳಿಗೆ ಗರಂ ಆಗುವ ಸ್ವಭಾವದಿಂದಾಗಿ ಜನ ಅವರನ್ನು ಮೆಚ್ಚಿಕೊಂಡಿದ್ದಾರೆ ಎಂದರು.
ಜಿ.ಪಂ.ಸದಸ್ಯ ಶಾಹುಲ್ ಹಮೀದ್ ಮಾತನಾಡಿ, ಈ ಬಾರಿ ವಸಂತ ಬಂಗೇರ ಕೇವಲ ಶಾಸಕರಾಗುವುದು ಮಾತ್ರವಲ್ಲ. ಮಂತ್ರಿಯಾಗಿ ಕಾಣುವ ಸೌಭಾಗ್ಯ ಬೆಳ್ತಂಗಡಿ ಜನತೆಯದ್ದಾಗಿದೆ. 1968ರಲ್ಲಿ ಸಾರ್ವಜನಿಕ ರಾಜಕೀಯ ಕ್ಷೇತ್ರಕ್ಕೆ ಇಳಿದ ಬಂಗೇರರು ಒಂದೇ ಒಂದು ಕಪ್ಪು ಚುಕ್ಕೆಯನ್ನು ತನ್ನ ಸಾರ್ವಜನಿಕ ಬದುಕಿನಲ್ಲಿ ಇಟ್ಟುಕೊಂಡವರಲ್ಲ. ಬಂಗೇರರ ಎಲ್ಲೋ ಇದ್ದ ಅಭ್ಯರ್ಥಿಯಲ್ಲ. ಅಥವಾ ಯಾವುದೋ ಕಾರ್ಯಕ್ರಮಕ್ಕೆ ಹೋಗಿ 2 ಸಾವಿರ 3 ಸಾವಿರ ಕೊಟ್ಟು ಜನಪ್ರಿಯತೆ ಗಳಿಸಿಕೊಂಡವರಲ್ಲ. ಬಂಗೇರರು ಜನರ ಸಮಸ್ಯೆಗಳಿಗೆ ನ್ಯಾಯ ನೀಡಿ ಜನಮನ್ನಣೆ ಗಳಿಸಿಕೊಂಡವರಾಗಿದ್ದಾರೆ. ರಾತ್ರಿ ಹಗಲು ಬೆಳ್ತಂಗಡಿ ಬಡ ಜನರ ಪರವಾಗಿ ಸೇವೆ ಸಲ್ಲಿಸಿದವರು. ತನ್ನ ಮನೆ ಆಸ್ತಿಗಾಗಿ ಎಂದೂ ಚಿಂತಿಸಿದವರಲ್ಲ. ಕಷ್ಟವನ್ನು ಹತ್ತಿರ ತಂದವರಿಗೆ ಅವರಿಗೆ ಸ್ಪಂದಿಸಿದ ಮಾನವೀಯ ಗುಣವುಳ್ಳ ವ್ಯಕ್ತಿ ವಸಂತ ಬಂಗೇರರಾಗಿದ್ದಾರೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ. ವೆಂಕಟೇಶ್ ಮಾತನಾಡಿ ವಿಧಾನಸಭಾ ಚುನಾವಣೆ ಈ ದೇಶದ ದಿಕ್ಸೂಚಿಯಾಗಬೇಕು. ಶಾಸಕ ಬಂಗೇರರು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಅವರ ಸಾಧನೆಗೆ ಸಾಕ್ಷಿ. ಸಿದ್ಧರಾಮಯ್ಯ ಸರ್ಕಾರ ನುಡಿದಂತೆ ನಡೆದ ಸರ್ಕಾರವಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ ಈ ಬಾರಿಯ ಚುನಾವಣೆ ಧರ್ಮ ಮತ್ತು ಅಧರ್ಮದ , ಸತ್ಯ ಅಸತ್ಯದ, ನ್ಯಾಯ ಅನ್ಯಾಯದ ಮಧ್ಯೆ ನಡೆಯುವ ಚುನಾವಣೆ. ಸುಳ್ಳನ್ನೇ ಬಂಡವಾಳ ಮಾಡಿಕೊಂಡವರನ್ನು ಜನ ತಿರಸ್ಕರಿಸಿ ಅಭಿವೃದ್ಧಿ ಪರ ಚಿಂತನೆಯುಳ್ಳವರಿಗೆ ಅಧಿಕಾ ನೀಡಬೇಕು ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಎ.ಸಿ ಜಯರಾಜ್ ಮಾತನಾಡಿದರು. ಸಮಾರಂಭದಲ್ಲಿ ಚುನಾವಣಾ ಉಸ್ತುವಾರಿಗಳಾದ ವಿಜಯಕುಮಾರ್ ರೈ, ಸೈಮನ್, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಶ್ರೀನಿವಾಸ ಕಿಣಿ, ನಗರ ಅಧ್ಯಕ್ಷ ರಾಜಶೇಖರ ಅಜ್ರಿ, ಕೆಪಿಸಿಸಿ ಸದಸ್ಯರಾದ ಪೀತಾಂಬರ ಹೇರಾಜೆ ಮತ್ತು ರಾಮಚಂದ್ರ ಗೌಡ,ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಇ. ಸುಂದರ ಗೌಡ, ತಾ.ಪಂ.ಅಧ್ಯಕ್ಷೆ ದಿವ್ಯಜ್ಯೋತಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಟಿ. ಸೆಬಾಸ್ಟಿಯನ್, ಜಿ.ಪಂ.ಸದಸ್ಯರಾದ ಧರಣೇಂದ್ರ ಕುಮಾರ್, ಶಾಹುಲ್ ಹಮೀದ್, ಶೇಖರ ಕುಕ್ಕೇಡಿ, ನಮಿತ, ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದನ್ ಕಾಮತ್, ಇಂಟಕ್ ಅಧ್ಯಕ್ಷ ಸುಭಾಶ್ಚಂದ್ರ ರೈ, ಕಿಸಾನ್ ಘಟಕದ ಅಧ್ಯಕ್ಷ ಪ್ರಮೋದ್ ಕುಮಾರ್ ರೇಖ್ಯ, ಮಹಿಳಾ ಘಟಕದ ಅಧ್ಯಕ್ಷೆ ಉಷಾ ಶರತ್, ಎ.ಪಿ.ಎಂ.ಸಿ ಅಧ್ಯಕ್ಷ ಸತೀಶ್ ಕಾಶಿಪಟ್ಣ, ನಗರ ಪ್ರಚಾರ ಸಮಿತಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಡಿಸಿಸಿ ಕಾರ್ಯದರ್ಶಿ ಜಗಧೀಶ್ ಡಿ, ಯೂತ್ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್, ಜಿಲ್ಲಾ ಕಾಂಗ್ರಸ್‌ನ ಅಬ್ದುಲ್ ಹಮೀದ್, ಬಿ.ಕೆ.ಇದಿನಬ್ಬ, ಅಲ್ಪಸಂಖ್ಯಾತ ಘಟಕದ ಅಶ್ರಮ್ ನೆರಿಯ, ಶ್ರೀಧರ ಬಿಢೆ, ರಘುರಾಮ ಶೆಟ್ಟಿ ಸಾಧನ, ಪಿ.ಕೆ. ರಾಜು ಪೂಜಾರಿ ಮುಂತಾದವರಿದ್ದರು.
ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಕೆ. ವಸಂತ ಬಂಗೇರ ಅವರು ನಗರದ ಅಂಬೇಡ್ಕರ್ ಭವನದ ಬಳಿ ಬಹಿರಂಗ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಳಿಕ ಅಲ್ಲಿಂದ ಮಿನಿ ವಿಧಾನಸೌಧದಲ್ಲಿರುವ ಚುನಾವಣಾ ಕಚೇರಿಗೆ ಕಾಲ್ನಡಿಗೆಯಲ್ಲಿ ಕಾರ್ಯಕರ್ತರೊಂದಿಗೆ ಬಂದು ನಾಮಪತ್ರ ಸಲ್ಲಿಸಿದರು. ಕಾರ್ಯಕರ್ತರು ಜಯಘೋಷದೊಂದಿಗೆ ಉತ್ಸಾಹದಿಂದ ಬಂಗೇರ ಅವರೊಂದಿಗೆ ಹೆಜ್ಜೆ ಹಾಕಿದರು. 12.45ಕ್ಕೆ ಬಂಗೇರ ಅವರು ನಾಮಪತ್ರವನ್ನು ಪತ್ನಿ ಸುಜಿತಾ ಬಂಗೇರ ಅವರೊಂದಿಗೆ ಸಲ್ಲಿಸಿದರು.
ಪ್ರಣಾಳಿಕೆಯ 165 ಭರವಸೆಗಳಲ್ಲಿ 159 ನ್ನು ಸಿದ್ದರಾಮಯ್ಯ ಈಡೇರಿಸಿದ್ದಾರೆ. ನನ್ನನ್ನು ಕಾಯಿ ಒಡೆಯುವ ಶಾಸಕ ಎಂದು ವಿರೋಧ ಪಕ್ಷದವರು ಗೇಲಿ ಮಾಡುತ್ತಿದ್ದಾರೆ. ತಾನು ತೆಂಗಿನ ಕಾಯಿ ಒಡೆದ ಜಾಗವೆಲ್ಲ ಅಭಿವೃದ್ಧಿಯಾಗಿದೆ. ಆ ಪ್ರದೇಶದಲ್ಲಿ ಶಾಲೆ, ಕಾಲೇಜು, ಆಸ್ಪತ್ರೆ, ರಸ್ತೆ, ಸೇತುವೆ ಮುಂತಾದ ಅನೇಕ ಅಭಿವೃದ್ಧಿ ಕಾರ್ಯಗಳು ಆಗಿದ್ದಾವೆ. ಹಾಗಾಗಿ ತೆಂಗಿನ ಕಾಯಿ ಒಡೆಯವಂತಹುದು ದೇವರ ಸಮಾನವಾದ ಕೆಲಸವಾಗಿದೆ. ಬಿಜೆಪಿ ಪಕ್ಷದವರು ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವು ಕುತಂತ್ರ ರಾಜಕಾರಣ ಮಾಡಬಾರದು. ಕಳೆದ 5 ವರ್ಷದ ಅವಧಿಯಲ್ಲಿ 38 ಸಾವಿರ ಅಕ್ರಮ ಸಕ್ರಮ ಅರ್ಜಿಗಳಿಗೆ ಹಕ್ಕುಪತ್ರ ನೀಡಿದ್ದೇನೆ. 94 ಸಿ ಮತ್ತು 94 ಸಿಸಿ ಯೋಜನೆಯಲ್ಲಿ ತಾಲೂಕಿನ 21 ಸಾವಿರ ಬಡವರ ಬದುಕು ಬೆಳಗುವ ಕೆಲಸ ಮಾಡಿದ್ದೇನೆ. ಅರ್ಜಿದಾರರು ಯಾವ ಪಕ್ಷದವರು ಎಂದು ನೋಡದೆ ಅವರಿಗೆ ನ್ಯಾಯ ಕೊಟ್ಟಿದ್ದೇನೆ. ನಾನು ಪ್ರಮಾಣಿಕವಾಗಿ ಕೆಲಸ ಮಾಡಿ ತಾಲೂಕಿನ, ತಾಲೂಕಿನ ಜನರ, ತನ್ನ ಗೌರವವನ್ನು ಕಾಪಾಡಿಕೊಂಡು ಬಂದಿದ್ದೇನೆ.
- ಕೆ ವಸಂತ ಬಂಗೇರ, ಕಾಂಗ್ರೆಸ್ ಅಭ್ಯರ್ಥಿ







