'ಪಟ್ಟಂದೂರು ಕೆರೆಯಲ್ಲಿ ಕಾಮಗಾರಿ ಮುಂದುವರಿಸುವುದಿಲ್ಲ': ಹೈಕೋರ್ಟ್‌ಗೆ ಹೇಳಿಕೆ ನೀಡಿದ ಬಿಬಿಎಂಪಿ
ಬೆಂಗಳೂರು, ಎ.20: ಪಟ್ಟಂದೂರು ಅಗ್ರಹಾರದ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ನಡೆಸಲಾಗುತ್ತಿರುವ 80 ಅಡಿ ವಿಸ್ತೀರ್ಣದ ರಸ್ತೆ ನಿರ್ಮಾಣ ಕಾಮಗಾರಿಯನ್ನು ಸದ್ಯದ ಮಟ್ಟಿಗೆ ಮುಂದುವರಿಸುವುದಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೈಕೋರ್ಟ್‌ಗೆ ಶುಕ್ರವಾರ ವಾಗ್ದಾನ ನೀಡಿದೆ.
ಬಿಬಿಎಂಪಿಯು ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ನಿಯಮಗಳನ್ನು ಉಲ್ಲಂಸಿ 80 ಅಡಿ ವಿಸ್ತೀರ್ಣದ 24 ಮೀಟರ್ ಉದ್ದದ ರಸ್ತೆಯನ್ನು ಬಿಬಿಎಂಪಿ ನಿರ್ಮಾಣ ಮಾಡುತ್ತಿದೆ ಎಂದು ಆರೋಪಿಸಿ ವೈಟ್‌ಫೀಲ್ಡ್ ರೈಸಿಂಗ್ ಟ್ರಸ್ಟ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಶುಕ್ರವಾರ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಈ ವೇಳೆ ಬಿಬಿಎಂಪಿ ಪರ ವಕೀಲರು ವಾದ ಮಂಡಿಸಿ, ಸದ್ಯ ರಸ್ತೆ ನಿರ್ಮಾಣವಾಗುತ್ತಿರುವ ಸ್ಥಳ ಕೆರೆಗೆ ಸೇರಿದೆಯೇ? ಅಥವಾ ಖಾಸಗಿಯವರಿಗೆ ಸೇರಿದೆಯೇ? ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಈ ಮಾಹಿತಿ ನೀಡಬಲ್ಲ ವರದಿಯನ್ನು ಸಂಬಂಧಪಟ್ಟ ಇಲಾಖೆಯಿಂದ ಕೇಳಲಾಗಿದೆ. ಅದರ ನಿರೀಕ್ಷೆಯಲ್ಲಿ ಪಾಲಿಕೆ ಇದ್ದು, ವರದಿ ಬರುವವರೆಗೂ ವಿವಾದಿತ ರಸ್ತೆ ನಿರ್ಮಾಣ ಕಾಮಗಾರಿ ಮುಂದುವರಿಸುವುದಿಲ್ಲ ಎಂದು ಕೊರ್ಟ್‌ಗೆ ತಿಳಿಸಿದರು. ಇದರಿಂದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿತು.
ಪಟ್ಟಂದೂರು ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಬಿಬಿಎಂಪಿ ನಿಯಮಗಳನ್ನು ಉಲ್ಲಂಘಿಸಿ ವರ್ತೂರು ಕೋಡಿ ಮತ್ತು ಐಟಿಪಿಎಲ್ ನಡುವೆ ಸಂಪರ್ಕ ಕಲ್ಪಿಸಲು 24 ಮೀಟರ್ ರಸ್ತೆ ನಿರ್ಮಿಸುತ್ತಿದೆ. ಈಗಾಗಲೇ ಕಾಮಗಾರಿಯನ್ನು ಆರಂಭಿಸಲಾಗಿದೆ. ಮರಳು ಮತ್ತು ಕಟ್ಟಡ ತ್ಯಾಜ್ಯವನ್ನು ತಂದು ಸುರಿಯಲಾಗಿದೆ. ನೆಲವನ್ನು ಸಮತಟ್ಟು ಮಾಡಲಾಗಿದೆ. ಒಂದೊಮ್ಮೆ ರಸ್ತೆ ನಿರ್ಮಾಣ ಮಾಡಿದರೆ ಕೆರೆ ಪ್ರದೇಶ ಹಾಗೂ ಸುತ್ತಲಿನ ಪರಿಸರ ಹಾಳಾಗಲಿದೆ ಈ ಹಿನ್ನೆಲೆಯಲ್ಲಿ ರಸ್ತೆ ನಿರ್ಮಿಸದಂತೆ ಬಿಬಿಎಂಪಿಗೆ ನಿರ್ದೇಶಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.







