ನೀತಿ ಸಂಹಿತೆ ಉಲ್ಲಂಘನೆ: 1.82 ಕೋಟಿ ರೂ. ನಗದು, 7 ಕೆಜಿ ಚಿನ್ನ ವಶ

ಬೆಂಗಳೂರು, ಎ.20: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಹಿನ್ನೆಲೆಯಲ್ಲಿ ಕಳೆದ 24 ಗಂಟೆಯಲ್ಲಿ ಸುಮಾರು 1.82 ಕೋಟಿ ರೂ. ನಗದು, ಹಾಗೂ 1.76 ಕೋಟಿ ರೂ. ಮೌಲ್ಯದ 7ಕೆಜಿ ಚಿನ್ನ ಹಾಗೂ 83 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ತಿಳಿಸಿದರು.
ಇದರ ಜತೆಗೆ 1.54 ಲಕ್ಷ ರೂ. ಮೌಲ್ಯದ 296 ಸೀರೆಗಳು, 6.87ಲಕ್ಷ ರೂ. ಮೌಲ್ಯದ ಮೊಬೈಲ್‌ಗಳು, 1.90 ಕೋಟಿ ರೂ. ಮೌಲ್ಯದ 90 ಅಕ್ಕಿ ಮೂಟೆಗಳು, 7ಲಕ್ಷ ರೂ. ಮೌಲ್ಯದ ಗಾಂಜಾ ಹಾಗೂ 13 ಕೋಟಿ ರೂ. ಮೌಲ್ಯದ ಮದ್ಯ ಸೇರಿದಂತೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಫ್ಲೈಯಿಂಗ್ ಸ್ಕ್ವಾಡ್‌ಗಳು ಯಶಸ್ವಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಅಬಕಾರಿ ಇಲಾಖೆಯು ಒಟ್ಟು 8.94 ಕೋಟಿ ರೂ. ಮದ್ಯವನ್ನು ವಶಪಡಿಸಿಕೊಂಡು ಅಬಕಾರಿ ಕಾಯ್ದೆಯ ಅನ್ವಯ 2,221 ಪ್ರಕರಣಗಳನ್ನು ದಾಖಲಿಸಿ, 422 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೂ 96,935 ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. 52 ಶಸ್ತ್ರಾಸ್ತ್ರಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಒಟ್ಟು 3 ಶಸ್ತ್ರಾಸ್ತ್ರ ಪರವಾನಿಗೆಯನ್ನು ರದ್ದುಪಡಿಸಲಾಗಿದೆ. ಇಲ್ಲಿಯವರೆಗೆ 27,754 ಜಾಮೀನು ರಹಿತ ವಾರೆಂಟ್‌ಗಳನ್ನು ಹೊರಡಿಸಲಾಗಿದೆ ಎಂದು ಅವರು ಹೇಳಿದರು.







