ಮಗುವನ್ನು ತಾಯಿಯ ವಶಕ್ಕೆ ನೀಡಲು ಹೈಕೋರ್ಟ್ ಆದೇಶ

ಬೆಂಗಳೂರು, ಎ.21: ಕೆನಡಾದಲ್ಲಿ ಜನಿಸಿದ್ದ ಏಳು ವರ್ಷದ ಬಾಲಕಿಯನ್ನು ಕೂಡಲೇ ಆಕೆಯ ತಾಯಿಗೆ ಹಸ್ತಾಂತರಿಸುವಂತೆ ನಗರ ಪೊಲೀಸರಿಗೆ ಹೈಕೋರ್ಟ್ ಆದೇಶ ನೀಡಿದೆ.
ಮಗುವಿನ ತಾಯಿ ಮಂಜುಮಾಲಿನಿ ಶೇಷಾಚಲಂ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾ.ಆರ್.ಬಿ.ಬೂದಿಹಾಳ್ ಮತ್ತು ನ್ಯಾ.ಕೆ.ಎಸ್.ಮುದ್ಗಲ್ ಅವರಿದ್ದ ವಿಭಾಗೀಯ ಪೀಠ, ಮಗುವನ್ನು ತಾಯಿಯ ವಶಕ್ಕೆ ಒಪ್ಪಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ.
ತನ್ನ ಮಗುವನ್ನು ಪತಿ ವಿಜಯ್ ತಿರುಜ್ಞಾನಂ ಮತ್ತು ಸಹೋದರಿ ಎಸ್.ಶಾಲಿನಿ 2012ರಿಂದ ಅಕ್ರಮ ಬಂಧನದಲ್ಲಿಟ್ಟಿದ್ದಾರೆ ಎಂದು ಮಂಜು ನ್ಯಾಯಾಲಯದ ಮೊರೆ ಹೋಗಿದ್ದರು.
ತಾಯಿ ಮತ್ತು ಮಗಳು ಇಬ್ಬರೂ ಕೆನಡಾದ ಪ್ರಜೆಗಳಾಗಿರುವುದರಿಂದ ಆಕೆ ತನ್ನ ಮಗುವನ್ನು ಕೆನಡಾಗೆ ಕರೆದೊಯ್ಯುವುದರಲ್ಲಿ ಯಾವುದೇ ಅಕ್ರಮವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಮಗುವಿನ ಸುಪರ್ದಿಗೆ ಸಂಬಂಧಿಸಿದಂತೆ ಶಾಲಿನಿ ಮತ್ತು ವಿಜಯ್ ತಿರುಜ್ಞಾನಂ ತಮ್ಮ ಕಾನೂನು ಬದ್ಧ ಹಕ್ಕನ್ನು ಸಿವಿಲ್ ಕೋರ್ಟ್‌ನಲ್ಲಿ ಮಂಡಿಬೇಕು ಎಂದು ಕೋರ್ಟ್ ಆದೇಶಿಸಿದೆ.
2014ರ ಜೂ.4ರಂದು ಕೆನಡಾದ ಒಂಟಾರಿಯಾ ಪ್ರಾಂತ್ಯದಲ್ಲಿ ಮಗು ಜನಿಸಿತ್ತು. ಆದರೆ, 2012ರ ಫೆ.21ರಂದು ಗಂಡ ಮತ್ತು ಹೆಂಡತಿ ನಡುವೆ ಕೌಟುಂಬಿಕ ಜಗಳ ನಡೆದಿತ್ತು. ಆದಾದ ನಂತರ ಹ್ಯಾಮಿಲ್ಟನ್ ನ್ಯಾಯಾಲಯ ಮಗುವನ್ನು ತಾಯಿಯ ವಶಕ್ಕೆ ಒಪ್ಪಿಸಿತ್ತು. ಮಂಜು ಮಾಲಿನಿ 2011ರಲ್ಲಿ ಬೆಂಗಳೂರಿಗೆ ಬಂದಿದ್ದರು. ಆ ಸಂದರ್ಭದಲ್ಲಿ ತಮ್ಮ ತಾಯಿ ಲತಾ ಶೇಷಾಚಲಂ ಬಳಿ ಮಗುವನ್ನು ಬಿಟ್ಟಿದ್ದರು. ಆಗ ಎಸ್ ಶಾಲಿನಿ ಮತ್ತು ಪತಿ ವಿಜಯ್ ಆ ಮಗುವನ್ನು ಮನೆಗೆ ಕರೆದುಕೊಂಡು ಹೋಗಿ ಅಕ್ರಮ ಬಂಧನದಲ್ಲಿಟ್ಟಿದ್ದರು ಎಂದು ಆರೋಪಿಸಿ ಮಗುವಿನ ತಾಯಿ ಮಂಜು ಶಾಲಿನಿ ನ್ಯಾಯಾಲಯದ ಮೊರೆ ಹೋಗಿದ್ದರು.







