ನಟಿ ಪೂಜಾಗಾಂಧಿ ಜೆಡಿಸ್ ಸೇರ್ಪಡೆ

ಬೆಂಗಳೂರು, ಎ.21: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಜೆಡಿಎಸ್‌ಗೆ ತಾರಾ ಮೆರಗು ಹೆಚ್ಚುತ್ತಿದ್ದು, ನಟಿ ಪೂಜಾ ಗಾಂಧಿ ಜೆಡಿಎಸ್ ಪಕ್ಷಕ್ಕೆ ಮರಳಿದ್ದಾರೆ. ಇವರೊಂದಿಗೆ ಬಳ್ಳಾರಿ ಅಲ್ಲಾಬಕ್ಷ್, ಉದ್ಯಮಿ ವಿಜಯ್ ಅವರು ಪಕ್ಷಕ್ಕೆ ಸೇರ್ಪಡೆಗೊಂಡರು.
ಶನಿವಾರ ನಗರದ ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್. ಸಿಂಧ್ಯಾ ಯುವ ಜೆಡಿಎಸ್ ಕಾರ್ಯಾಧ್ಯಕ್ಷ ಚಂದ್ರಶೇಖರ್ ಅವರು ಜೆಡಿಎಸ್ ಬಾವುಟ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.
ಪಕ್ಷ ಸೇರ್ಪಡೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಟಿ ಪೂಜಾ ಗಾಂಧಿ, ನನ್ನ ರಾಜಕೀಯ ಜೀವನ ಆರಂಭವಾಗಿದ್ದೆ ಜೆಡಿಎಸ್ ಪಕ್ಷದಿಂದ. ಆದರೆ, ನನ್ನ ಕೆಲವೊಂದು ತಪ್ಪು ನಿರ್ಧಾರಗಳಿಂದ ನಾನು ಜೆಡಿಎಸ್ ತೊರೆದಿದ್ದೆ. ಹೀಗಾಗಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದರು.
ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ನಾನು ಟಿಕೆಟ್ ಆಕಾಂಕ್ಷಿಯಾಗಿ ಪಕ್ಷ ಸೇರ್ಪಡೆಯಾಗಿಲ್ಲ. ಈ ಹಿಂದೆ ಜೆಡಿಎಸ್ ನನಗೆ ಒಳ್ಳೆಯ ಸ್ಥಾನಮಾನ ನೀಡಿತ್ತು. ಈ ನಿಟ್ಟಿನಲ್ಲಿ ಪಕ್ಷ ಸಂಘಟನೆಗಾಗಿ ಪ್ರಚಾರ ಕಾರ್ಯದಲ್ಲಿ ತೊಡಗುತ್ತೇನೆ. ಕುಮಾರಸ್ವಾಮಿಯವರ 20 ತಿಂಗಳು ಅಧಿಕಾರದ ಅವಧಿಯಲ್ಲಿ ಮಾಡಿದ ಸಾಧನೆಗಳನ್ನು ರಾಜ್ಯದ ಜನರಿಗೆ ತಲುಪಿಸಿ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಮನವಿ ಮಾಡುತ್ತೇನೆ ಎಂದು ಅವರು ತಿಳಿಸಿದರು.
ನಾನು ಉತ್ತರ ಭಾರತದವಳಾಗಿದ್ದರೂ ಸಹ ಕರ್ನಾಟಕ ನನ್ನ ಕರ್ಮಭೂಮಿ. ದೇವೇಗೌಡ, ಕುಮಾರಸ್ವಾಮಿಯವರು ರಾಜ್ಯದ ರೈತರು ಹಾಗೂ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದು, ಜನಸಾಮಾನ್ಯರ ಕೈಗೆ ಸಿಗುತ್ತಾರೆ. ಆದರೆ, ರಾಷ್ಟ್ರೀಯ ಪಕ್ಷಗಳ ನಾಯಕರು ಜನಸಾಮಾನ್ಯರ ಕೈಗೆ ಸಿಗುವುದಿಲ್ಲ. ಜತೆಗೆ ರಾಷ್ಟ್ರೀಯ ಪಕ್ಷಗಳು ಜನರನ್ನು ವಿಭಜಿಸುವ ಕೆಲಸ ಮಾಡುವುದರಲ್ಲಿ ನಿರತವಾಗಿವೆ ಎಂದು ದೂರಿದ ಅವರು, ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದನ್ನು ಜನರಿಗೆ ಮನವರಿಕೆ ಮಾಡಬೇಕಿದೆ ಎಂದು ಹೇಳಿದರು.
ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಪರ ಅಲೆಯಿದೆ. ಹೀಗಾಗಿ, ನಮ್ಮ ಪಕ್ಷದ ಸಿದ್ಧಾಂತಗಳನ್ನು ಒಪ್ಪಿ ಹಲವರು ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಇಂದು ಪಕ್ಷದ ವರಿಷ್ಠರ ತೀರ್ಮಾನದಂತೆ ಪೂಜಾಗಾಂಧಿ ಸೇರಿದಂತೆ ಹಲವರು ಸೇರ್ಪಡೆಯಾಗಿದ್ದಾರೆ.
-ಪಿ.ಜಿ.ಆರ್. ಸಿಂಧ್ಯಾ, ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ







